ಗದಗ:- 2024- 2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಇಂದು ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಫಲಿತಾಂಶದ ಪ್ರಕಾರ ಒಟ್ಟಾರೆ ಹಾಜರಾದವರ ಪೈಕಿ ಶೇ 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಿರೀಕ್ಷೆಯಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಇನ್ನೂ ಕಳೆದ ಮೂರು ವರ್ಷದಿಂದ ಫಲಿತಾಂಶದಲ್ಲಿ ಕುಸಿತ ಕಂಡಿದ್ದ ಗದಗ ಜಿಲ್ಲೆಯು, ಈ ಬಾರಿ 25ನೇ ಸ್ಥಾನ ಪಡೆಯುವ ಮೂಲಕ ಅಲ್ಪ ಏರಿಕೆ ಕಂಡಿದೆ. 2024 ರಲ್ಲಿ ರಾಜ್ಯದಲ್ಲಿಯೇ ಕೊನೆ ಸ್ಥಾನದಲ್ಲಿದ್ದ ಗದಗ ಜಿಲ್ಲೆ, ಈ ಬಾರಿ 7 ಸ್ಥಾನ ಏರಿಕೆ ಕಂಡು ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ನೀಡುವ ಆಶಾಭಾವನೆ ವ್ಯಕ್ತವಾಗಿದೆ.
ಸದ್ಯ ಗದಗ ಜಿಲ್ಲೆ ಶೇಕಡಾವಾರು ಫಲಿತಾಂಶದಲ್ಲಿ ಶೇ. 66.64 ರಷ್ಟು ದಾಖಲಿಸಿದೆ. ಕಳೆದ ವರ್ಷ ಶೇ. 72.86 ಪ್ರತಿಶತ ದಾಖಸಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ರಾಜ್ಯ ಮಟ್ಟದ ರ‌್ಯಾಂಕಿಂಗ್ ನಲ್ಲಿ ಏರಿಕೆಯಾದರೂ ಶೇಕಡಾವಾರು ಫಲಿತಾಂಶದಲ್ಲಿ ಕುಸಿತ ಕಂಡಿದೆ. ಒಟ್ಟಾರೆ ಶೇಕಡಾವಾರು ಫಲಿತಾಂಶದಲ್ಲಿ ಶೇ. 56.35 ಬಾಲಕರು ತೇರ್ಗಡೆಯಾಗಿದ್ದಾರೆ. ಶೇ. 74.94ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಗದಗ ಜಿಲ್ಲೆಯ ವಿವಿಧ ಕಾಲೇಜಿನ ಫಲಿತಾಂಶ ನೋಡೋದಾದರೆ…
ಕಲಾ ವಿಭಾಗದಲ್ಲಿ:-
* ಮುಂಡರಗಿಯ ಜೆ.ಎ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗೊನಬಾಳ 587 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
* ಗಜೇಂದ್ರಗಡದ ಎಸ್ ಎಮ್ ಭೂಮರೆಡ್ಡಿ ಕಾಲೇಜಿನ ವಿದ್ಯಾರ್ಥಿನಿ ಸೌಂದರ್ಯ ನಿಂಬಾಲಗುದಿ 578 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
* ಲಕ್ಷ್ಮೇಶ್ವರದ ಎಸ್ ಎಮ್ ಪ.ಪೂ ಕಾಲೇಜಿನ ವಿದ್ಯಾರ್ಥಿ ಅಪ್ಸಾನ್ ಬೇಗಂ ನಧಾಪ್ 576 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ :-
* ಅದರಂತೆ ವಾಣಿಜ್ಯ ವಿಭಾಗದಲ್ಲಿ ಗದಗದ ಜೆಟಿ ಕಾಲೇಜಿನ ವಿದ್ಯಾರ್ಥಿನಿ ನವತಿಕ ಹಜಾರಿ 592 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
* ಬೆಟಗೇರಿಯ ಎ.ಎಸ್ ಎಸ್ ಕಾಲೇಜಿನ ವಿದ್ಯಾರ್ಥಿ ವಿಜಯರಾಜ್ ಸಿದ್ದಲಿಂಗ 590 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
* ಗಜೇಂದ್ರಗಡದ ಎಸ್ ಎ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ನಮ್ರತಾ ಪಾಟೀಲ್ 588 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗ:-
* ವಿಜ್ಞಾನ ವಿಭಾಗದಲ್ಲಿ ಗದಗದ ಜೆಟಿ ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ಹಿರೇಗೌಡ್ರ 590 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
* ನರೇಗಲ್ ನ ಎಸ್ ಎ ಕಾಲೇಜಿನ ವಿದ್ಯಾರ್ಥಿನಿ ಕುಸುಮಾ ಪಟ್ಟಣಶೆಟ್ಟಿ 582 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
* ಲಕ್ಷ್ಮೇಶ್ವರದ ಸರ್ಕಾರಿ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮೀ ಜಗಳೂರು 580 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಫಲಿತಾಂಶ ವಿವರ:
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. 93.90 ಶೇಕಡ ಫಲಿತಾಂಶ ಪಡೆದು ಉಡುಪಿ ಮೊದಲ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಯು ಶೇ.48.45 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.