ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ಗುಗ್ಗಳೋತ್ಸವ ಹಾಗೂ ಅಗ್ನಿ ಹಾಯುವ ಕಾರ್ಯಕ್ರಮ ಗುರುವಾರ ಮುಂಜಾನೆ ಶೃದ್ಧಾ ಭಕ್ತಿಯಿಂದ ನಡೆಯಿತು.
ಮಾರುತಿ ದೇವಸ್ಥಾನದ ಹತ್ತಿರವಿರುವ ಹನುಮನ ಭಾವಿಯಲ್ಲಿ ಧಾರ್ಮಿಕ ವಿಧಿ-ವಿದಾನಗಳೊಂದಿಗೆ ವೀರಭದ್ರ ದೇವರ ಪಾಲಕಿ ಪೂಜೆ ನೆರವೇರಿಸುವದರೊಂದಿಗೆ ಗುಗ್ಗಳೊತ್ಸವ ಪ್ರಾರಂಭವಾಯಿತು. ಯುವಕರ ನಂದಿಕೋಲ ಕುಣಿತ, ಪುರವಂತರು ವೀರಭದ್ರ ದೇವರ ಚರಿತ್ರೆಯ ವೀರಾವೇಶದ ಒಡಪುಗಳು ಸೇರಿದ ಭಕ್ತಾಧಿಗಳ ಭಕ್ತಿಯನ್ನು ಇಮ್ಮಡಿಗೊಳಿಸಿತು.
ಈ ಸಂದರ್ಭದಲ್ಲಿ ವೀರಭದ್ರನ ವೇಷ-ಭೂಷಣಗಳು ಗಮನ ಸೆಳೆದವು. ಐದು ಸ್ಥಳದಲ್ಲಿ ಪಾಲಕಿಯನ್ನು ಪ್ರತಿಷ್ಠಾಪಿಸಿ ವೀರಭದ್ರ ದೇವರ ಒಡಪುಗಳನ್ನು ಹೇಳಲಾಯಿತು. ಭಕ್ತಾಧಿಗಳು ತಮ್ಮ ಗಲ್ಲಕ್ಕೆ ಶಸ್ತçವನ್ನು ಹಾಕಿಸಿಕೊಂಡು ಸಂಕಲ್ಪದೊಂದಿಗೆ ಬೇಡಿಕೊಂಡರು. 63 ಗಂಟುಗಳ್ಳುಳ್ಳ ದಾರದ ಶಸ್ತçವನ್ನು 15ಕ್ಕೂ ಹೆಚ್ಚು ಭಕ್ತರು ತಮ್ಮ ಗಲ್ಲಕ್ಕೆ ಹಾಕಿಸಿಕೊಂಡಿದ್ದು ವಿಶೇಷವಾಗಿತ್ತು.
ದೇವಸ್ಥಾನ ತಲುಪಿದ ಗುಗ್ಗಳೋತ್ಸವದ ನಂತರ ಪುರವಂತರು, ಪಾಲಕಿ ಸೇವಕರು, ನಂದಿಕೋಲ ಹೊತ್ತವರು ಅಗ್ನಿಕುಂಡದಲ್ಲಿ ಹಾಯುವ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನೆರವೇರಿತು.