ಮಾತನಾಡಿ ನನ್ನ ಇಸ್ಲಾಂ ಧರ್ಮದ ಗೆಳೆಯ ಗೆಳತಿಯರೇ………..

Vijayasakshi (Gadag News) :

ವಿಜಯಸಾಕ್ಷಿ ವಿಶೇಷ

ಮುಕ್ತವಾಗಿ ಮುಕ್ತ ಮುಕ್ತವಾಗಿ ಧೈರ್ಯದಿಂದ ನಿಮ್ಮ ಹೃದಯಗಳ ಅಂತರಾಳದಿಂದ ಮನಸ್ಸುಗಳ ವಿಶಾಲತೆಯಿಂದ…….

ವಿವೇಕದಿಂದ, ವಿವೇಚನೆಯಿಂದ, ಮಾನವೀಯತೆಯಿಂದ,
ಸಮಾನತೆಯಿಂದ,
ಆಧುನಿಕತೆಯಿಂದ ತೆರೆದುಕೊಳ್ಳಿ……..

ನನ್ನ ದೇಶದ ಮುಸ್ಲಿಂ ಭಾಂಧವರೇ,
ಇದು ಭಾರತ, ನಿಮ್ಮದೇ ನೆಲ. ಅಭಿವ್ಯಕ್ತಿ ಸ್ವಾತಂತ್ರ್ಯ ನಿಮ್ಮ ಹಕ್ಕು. ಅದನ್ನು ಉಪಯೋಗಿಸಿಕೊಳ್ಳಿ…….

ವಿಶ್ವದ ಎಲ್ಲಾ ಚಟುವಟಿಕೆಗಳನ್ನು ನೀವು ಗಮನಿಸುತ್ತಿದ್ದೀರಿ, ಎಲ್ಲಾ ಮಾಹಿತಿಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಿದೆ ……….

ಇದು ಗ್ರೀಕ್, ರೋಮನ್, ನೈಲ್, ಸಿಂಧೂ ನಾಗರಿಕತೆಯ ಕಾಲವಲ್ಲ,

ಇದು ವೇದಗಳ, ಬುದ್ದನ, ಪೈಗಂಬರನ, ಯೇಸುವಿನ ಕಾಲವಲ್ಲ……..

ಇದು ಜೋ ಬಿಡೆನ್, ನರೇಂದ್ರ ಮೋದಿ, ರೌಹಾನಿ, ಷೀ ಜಿನ್ ಪಿಂಗ್, ಪುಟಿನ್, ನೆತನ್ಯಾವು, ಇಮ್ರಾನ್ ಖಾನ್ ಗಳ ಕಾಲ…………

ಇದು ಕಲ್ಲು ಮಣ್ಣು ಕುದುರೆ ಒಂಟೆ ಕತ್ತೆಗಳ ಕಾಲವಲ್ಲ,

ಬಾಂಬು ಬಂದೂಕು ಮಿಸೈಲ್ ಸ್ಯಾಟಲೈಟ್ ಮಾನವ ಆತ್ಮಹತ್ಯೆ ಬಾಂಬುಗಳ ಕಾಲ……..

ನಿಮಗೆ ಅರ್ಥವಾಗಬೇಕು……

ವಿಶ್ವದ ಈ ಸಂದರ್ಭದಲ್ಲಿ ಯಾವ ದೇಶ ಮುಂದುವರಿದಿದೆ,ಯಾವ ದೇಶ ಹಿಂದುಳಿದಿದೆ, ಯಾವ ದೇಶ ಹಾಳಾಗಿದೆ,ಯಾವ ದೇಶ ಶಾಂತಿಯಿಂದಿದೆ, ಯಾವ ದೇಶ ರಕ್ತಪಾತದಲ್ಲಿ ಮುಳುಗಿದೆ, ಯಾವ ದೇಶ ಧರ್ಮಾಂಧವಾಗಿದೆ, ಯಾವ ದೇಶ ಜಾತ್ಯಾತೀತವಾಗಿದೆ, ಯಾವ ದೇಶದಲ್ಲಿ ನೇರ ಭಯೋತ್ಪಾದಕರಿದ್ದಾರೆ, ಯಾವ ದೇಶದಲ್ಲಿ ಪರೋಕ್ಷ ಭಯೋತ್ಪಾದಕರಿದ್ದಾರೆ, ಯಾವ ಧರ್ಮ ಶಾಂತಿಯನ್ನು ಬೋಧಿಸುತ್ತದೆ, ಯಾವ ಧರ್ಮ ಹಿಂಸೆಯನ್ನು ಪ್ರಚೋದಿಸುತ್ತದೆ ಎಲ್ಲವೂ ನಿಮಗೆ ತಿಳಿದಿದೆ.

ಈ ಹಬ್ಬದ ಸಮಯದಲ್ಲಿ ನಿಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಿ. ನಿಮ್ಮ ಶಕ್ತಿ ಸಾಮರ್ಥ್ಯ ಅರಿತುಕೊಳ್ಳಿ ಹಾಗೆಯೇ ನಿಮ್ಮ ಮೇಲಿನ ಆರೋಪ ಮತ್ತು ದೌರ್ಬಲ್ಯಗಳನ್ನು ಸಹ ಅವಲೋಕಿಸಿ. ವಿಶ್ವವನ್ನು ಭಾರತವನ್ನು ಶಾಂತಿಯ ಕಡೆಗೆ ಮುನ್ನಡೆಸುವ ನಾಯಕತ್ವ ವಹಿಸಿ. ಆರೋಪ ಪ್ರತ್ಯಾರೋಪಗಳಿಗಿಂತ ಸಕಾರಾತ್ಮಕ ಚಟುವಟಿಕೆಗಳಿಗೆ ಮಹತ್ವ ನೀಡಿ.

ವಿಶ್ವದ ಜನ ಆಶ್ಚರ್ಯ ಪಡುವಂತೆ ಆಧುನಿಕ ಮತ್ತು ವೈಚಾರಿಕ ಚಿಂತನೆಗಳಿಂದ, ಮೂಲ ಧರ್ಮದ ನಿಷ್ಠೆಗಿಂತ ಮಾನವ ಧರ್ಮದ ನಿಷ್ಠೆ ನಿಮ್ಮದಾಗಲಿ……

ನೀವು ಒಪ್ಪಿ – ಬಿಡಿ ಅಥವಾ ಇದು ಸುಳ್ಳೋ – ನಿಜವೋ ಒಟ್ಟಿನಲ್ಲಿ ಜಾಗತಿಕವಾಗಿ ಇಸ್ಲಾಂ ಮತ್ತು ಭಯೋತ್ಪಾದನೆ ಒಂದಕ್ಕೊಂದು ತಳುಕು ಹಾಕಿಕೊಂಡಿದೆ.

ಅದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣಗಳು ಏನೇ ಇರಬಹುದು. ಎಲ್ಲಾ ಧರ್ಮಗಳಲ್ಲೂ ಭಯೋತ್ಪಾದನೆ ಇರಬಹುದು. ಆದರೆ ಭಯೋತ್ಪಾದನೆ ಇರಾಕ್, ಸಿರಿಯಾ, ಆಪ್ಘನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಅತಿಹೆಚ್ಚು ಇರುವುದರಿಂದ ಅದು ಇಸ್ಲಾಂ ಭಯೋತ್ಪಾದನೆಯಾಗಿ ಬಿಂಬಿತವಾಗಿದೆ.

ಉಗ್ರರ ಕ್ರೌರ್ಯ ಮತ್ತು ಮುಗ್ಧರ ಅಸಹಾಯಕ ಮಾರಣ ಹೋಮ ಮಾಧ್ಯಮಗಳಲ್ಲಿ ಪ್ರಸಾರವಾಗವುದನ್ನು ನೋಡಿದರೆ ಕೋಪ ಮತ್ತು ದುಃಖ ಒಟ್ಟಿಗೇ ಉಂಟಾಗುತ್ತದೆ. ಅದಕ್ಕೆ ಕಾರಣರಾದವರ ಬಗ್ಗೆ ಯಾರಿಗೇ ಆಗಲಿ ಆಕ್ರೋಶ ಉಕ್ಕುತ್ತದೆ.

ಇಂತಹ ಸೂಕ್ಷ್ಮ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ಲಾಂ ಶಾಂತಿ ಸೌಹಾರ್ದತೆಯ ಸಂಕೇತ ಎಂದು ವಿಶ್ವಕ್ಕೇ ನಿರೂಪಿಸುವ ಬಹುದೊಡ್ಡ ಜವಾಬ್ದಾರಿ ಇರುವುದು ಮತ್ತು ಹೊರಬೇಕಾಗಿರುವುದು ಬಹುಶಃ ಜನಸಂಖ್ಯೆಯ ದೃಷ್ಟಿಯಿಂದ ಅತಿಹೆಚ್ಚು ಜನರನ್ನು ಒಟ್ಟಿಗೆ ಹೊಂದಿರುವ ಭಾರತೀಯ ಮುಸ್ಲಿಮರದು.ಅದಕ್ಕೆ ಕಾರಣವೂ ಇದೆ.

ಭಾರತೀಯ ನೆಲದ , ಜಾತ್ಯಾತೀತ ಸಂವಿಧಾನದ , ಸರ್ವ ಧರ್ಮಗಳ ಸಮನ್ವಯದ, ಶಾಂತಿಯ ನಾಡಾದ ಇಲ್ಲಿನ ಗುಣಗಳನ್ನು ತಮ್ಮ ರಕ್ತದಲ್ಲಿಯೇ ಹೊಂದಿದ್ದಾರೆ ಬಹಳಷ್ಟು ಮುಸ್ಲಿಂಮರು . ತಮ್ಮ ಎಲ್ಲಾ ತೃಪ್ತಿ ಅತೃಪ್ತಿಗಳ ನಡುವೆಯೂ ಅನೇಕ ಶತಮಾನಗಳಿಂದ ವಿಭಿನ್ನ ಆಚರಣೆಗಳ ಹಿಂದೂಗಳ ಜೊತೆ ಸೌಹಾರ್ದತೆ ಮತ್ತು ಸಮನ್ವಯತೆಯಿಂದ ಜೀವಿಸುತ್ತಿರುವ ಅನುಭವ ಮತ್ತು ಇತಿಹಾಸ ಅವರಿಗಿದೆ.

ಬುದ್ಧ ಮಹಾವೀರ ಗುರುನಾನಕ್ ರಂತ ಶಾಂತಿ ಸಹಿಷ್ಣುಗಳ ನಾಡಿನಲ್ಲಿ,‌ ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ರವರ ಸಾಮಾಜಿಕ ಸಮಾನತೆ ಮತ್ತು ಮಾನವೀಯ ಚಳವಳಿಯ ಈ ಮಣ್ಣಿನಲ್ಲೇ ಹುಟ್ಟಿದ ಮುಸ್ಲೀಮರು ಅವುಗಳ ಪ್ರಭಾವದಿಂದ ಪ್ರೇರಿತರಾಗಿ ತಮ್ಮ ನಡವಳಿಕೆಗಳಲ್ಲಿ ಅವರ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ.

ಭಾರತೀಯರ ಜೀವನ ಶೈಲಿ, ಸರ್ವ ಧರ್ಮ‌ಸಹಿಷ್ಣತೆ, ಶಾಂತಿ ಸಹಬಾಳ್ವೆ ಅವರಿಗೆ ಮನವರಿಕೆಯಾಗಿದೆ. ಹಾಗೆಯೇ ಇಲ್ಲಿನ ಮೌಡ್ಯ ಅಜ್ಞಾನ ರಾಜಕೀಯದಲ್ಲೂ ಕೂಡ ಅವರ ಪಾಲಿದೆ.

ಪರ್ಷಿಯನ್ ಮತ್ತು ಅರಬ್ ದೇಶಗಳಷ್ಟು ಗಾಢ ಧಾರ್ಮಿಕ ಮೂಲಭೂತವಾದಿತನವನ್ನು ಹೊಂದದೆ, ಹಿಂಸೆ ಮತ್ತು ಅಮಾಯಕರ ಮಾರಣಹೋಮ ಖುರಾನ್ ನ ತತ್ವಗಳಿಗೆ ವಿರುದ್ಧವಾಗಿದೆ ಎಂದು ನಂಬಿ ಆಚರಿಸುವ ಮನೋಭಾವ ಅನೇಕ ಭಾರತೀಯ ಮುಸ್ಲೀಮರಲ್ಲಿ ಅಡಕವಾಗಿದೆ.

ಇತ್ತೀಚಿನ ದಿನಗಳಲ್ಲಿ ಇಲ್ಲಿನ ಹಿಂದೂ ಪ್ರಗತಿಪರರ ನಿಲುವುಗಳನ್ನು ಬಹುತೇಕ ಬೆಂಬಲಿಸುವ ಇವರು ಇನ್ನೂ ಹೆಚ್ಚು ಹೆಚ್ಚು ಧಾರ್ಮಿಕ ಅಂಧಶ್ರಧ್ಧೆಯನ್ನು ಕಡಿಮೆಗೊಳಿಸಿಕೊಳ್ಳುವ ಮೂಲಕ ಮತ್ತು ಭಯೋತ್ಪಾದಕ ಹಿಂಸೆಯನ್ನು ಖಂಡಿಸುವ ಮತ್ತು ತಡೆಯುವ ಮುಖಾಂತರ ಆಧುನಿಕತೆಗೆ ಮತ್ತು ವೈಚಾರಿಕತೆಗೆ ತಮ್ಮನ್ನು ಮುಕ್ತಗೊಳಿಸಿಕೊಂಡು ಇಡೀ ವಿಶ್ವಕ್ಕೇ ಶಾಂತಿ ಧೂತರಾಗುವ ಬಹುದೊಡ್ಡ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ರಂಜಾನ್ ನ ಈ ಶುಭ ಸಂದರ್ಭದಲ್ಲಿ ಆಶಿಸುತ್ತಾ…..

ಏಕೆಂದರೆ ವಿಶ್ವದಲ್ಲಿ ಅನೇಕ ಧರ್ಮಗಳ ಹುಟ್ಟಿನ ಮತ್ತು ಸಮನ್ವಯದ ಹಾಗೂ ಭಿನ್ನತೆಯಲ್ಲೂ ಐಕ್ಯತೆಯನ್ನು ಹೊಂದಿದ ಏಕೈಕ ರಾಷ್ಟ್ರ ನಮ್ಮ ತಾಯ್ನಾಡು ಭಾರತ.

ನೀವೂ ಭಾರತದ ಪ್ರಜೆಗಳು. ನಿಮ್ಮಲ್ಲಿಯೂ ನಮ್ಮಂತೆ ಮೌಡ್ಯವಿದೆ, ಹಿಂಸೆಯಿದೆ, ಅತಿರೇಕವಿದೆ, ಧಾರ್ಮಿಕ ಅಂಧಶ್ರದ್ದೆ ಇದೆ. ಬಹಳಷ್ಟು ಮೂಲಭೂತವಾದಿಗಳು ಧರ್ಮ ಮತ್ತು ದೇಶದ ಆಯ್ಕೆಯಲ್ಲಿ ಧರ್ಮವನ್ನು ಒಪ್ಪಿಕೊಳ್ಳುವ ಮೂರ್ಖತನವಿದೆ. ಹಿಂದೂ ಮೂಲಭೂತವಾದಿಗಳ ಪ್ರಚೋದನೆಗೆ ಸುಲಭವಾಗಿ ಬಲಿಯಾಗುವ ಹುಂಬುತನವಿದೆ.

ಅದಕ್ಕಾಗಿಯೇ ಈ ನೆಲದ ನಮ್ಮದೇ ಸಂಸ್ಕೃತಿಯ ಕೇವಲ ಕೆಲವು ಭಿನ್ನ ಆಚರಣೆಗಳ ನಮ್ಮದೇ ಜನರ ಆತ್ಮಾವಲೋಕನಕ್ಕಾಗಿ ಈ ಮನವಿ.
ಈ ದೇಶ, ನಮ್ಮದು ಮತ್ತು ನಿಮ್ಮದು.
ಯಾವುದೇ ಅಭದ್ರತೆ ಬೇಡ. ಎರಡು ಧರ್ಮಗಳು ವಿರುದ್ಧವಾಗುವ ಕ್ರಿಯೆಗಿಂತ ಅವುಗಳ ಐಕ್ಯವಾಗುವ, ಸಮನ್ವಯವಾಗುವ ದಿನಗಳು ಮುಂದೆ ಬರಲಿ ಎಂಬ ಆಶಯದೊಂದಿಗೆ……

ಬನ್ನಿ ನನ್ನ ಸಹಧರ್ಮೀಯ ಭಾಂಧವರೆ,
ಒಗ್ಗಟ್ಟಾಗೋಣ ನಾವು ನೀವು,

ಬನ್ನಿ ನನ್ನ ಮುಸ್ಲಿಂ ಸಹೋದರ ಸಹೋದರಿಯರೆ,
ಬದಲಾಗೋಣ, ಅಭಿವೃದ್ಧಿಯತ್ತ ಮುನ್ನಡೆಯೋಣ,

ಬನ್ನಿ ನನ್ನ ಇಸ್ಲಾಂ ಗೆಳೆಯ ಗೆಳತಿಯರೆ,
ಕಟ್ಟೋಣ ಬಲಿಷ್ಠ ಭಾರತವನ್ನು,

ನೀವೂ ನಮ್ಮಂತೆ, ನಾವೂ ನಿಮ್ಮಂತೆ,
ಅದೇ ರಕ್ತ ಮೂಳೆ ಮಾಂಸ ಚರ್ಮಗಳ ಹೊದಿಕೆ,

ಅದೇ ಭಯ ಭಕ್ತಿ,ನೋವು ನಲಿವು,
ಸುಖ ದು:ಖ,ಪ್ರೀತಿ ದ್ವೇಷ,
ಅದೇ ಗಾಳಿ ಬೆಳಕು, ಅನ್ನ ನೀರು, ನೆಲ,

ನಿಮ್ಮಲ್ಲೂ ನಮ್ಮಂತೆ ಮೌಡ್ಯವಿದೆ, ಅಂಧ ಭಕ್ತಿಯಿದೆ,
ನಿಮ್ಮಲ್ಲೂ ದಡ್ಡತನ, ಬಡತನ, ಅಸಮಾನತೆಯಿದೆ,

ಬದಲಾಗಬೇಕಿದೆ ನಾವು ನೀವು ಆಧುನಿಕತೆಯ ಹೊಸ ಮನ್ವಂತರಕೆ,

ಸ್ತ್ರೀ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಬೇಕಿದೆ,

ನಿಮ್ಮದೇ ಅನುಭವದ ಬೆಳಕಿನಲ್ಲಿ ಕತ್ತಲೆಯನ್ನು ಒದ್ದೋಡಿಸಿ,

ಭಕ್ತಿಯಿದ್ದರೆ ಇರಲಿ, ನಂಬಿಕೆಯಿದ್ದರೆ ಇರಲಿ,
ನಿಮ್ಮ ಆಚಾರ ವಿಚಾರ ಸಂಪ್ರದಾಯ ಗಳಲ್ಲಿ,
ಆದರೆ ಅದನ್ನು ಮೀರಿದ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ,

ಯೋಚಿಸುವ, ಪ್ರಶ್ನಿಸುವ ಚರ್ಚಿಸುವ ವಿಶಾಲ ಮನೋಭಾವ ನಿಮ್ಮದಾಗಲಿ,

ಭಕ್ತಿಯಿಂದ ಪೂಜಿಸುವುದಕ್ಕಿಂತ ಅದೇ ಅಂಶಗಳನ್ನು,
ಜೀವನದಲ್ಲಿ ಅಳವಡಿಸಿಕೊಳ್ಳುವುದು ಅದಕ್ಕೆ ನೀವು ಸಲ್ಲಿಸುವ ಗೌರವ,

ಹರಿದು ಬರಲು ಬಿಡಿ ಒಳ್ಳೆಯ ವಿಷಯಗಳನ್ನು ಎಲ್ಲಾ ಕಡೆಯಿಂದಲೂ,

ತಿರಸ್ಕರಿಸಿ ಕೆಟ್ಟ ಅಂಶಗಳನ್ನು ಅದು ಎಷ್ಟೇ ಪವಿತ್ರವಾಗಿದ್ದರೂ ,

ಸಮಾನತೆ, ಸ್ವಾತಂತ್ರ್ಯ, ಮಾನವೀಯತೆಗೆ ನಾವಿದ್ದೇವೆ ನಿಮ್ಮೊಂದಿಗೆ ಎಂದೆಂದಿಗೂ,

ಈ ನೆಲ ನಮ್ಮೆಲ್ಲರದು,

ನಿಮ್ಮಲ್ಲೂ, ನಮ್ಮಲ್ಲೂ ಹಿಂಸೆ ದ್ವೇಷಗಳು ಮರೆಯಾಗಲಿ,
ಪ್ರೀತಿ ಸ್ನೇಹ ವಿಶ್ವಾಸ ಭ್ರಾತೃತ್ವಗಳು ಬೆಸೆಯಲಿ,

ನಿಮ್ಮನ್ನು ಅನುಮಾನಿಸುವವರಿಗೆ ನಾವು ಉತ್ತರಿಸುತ್ತೇವೆ,
ಇರಲಿ ನಿಮ್ಮ ನಂಬಿಕೆ ನಿಯತ್ತು ಭಾರತೀಯತೆಯೆಡೆಗೆ,

ಹಿಂದಿನಂತೆ, ಇಂದಿನಂತೆ ಮುಂದೆಯೂ,,

ಮುಂದೊಂದು ದಿನ ನಮ್ಮ ನಡುವಿನ ಭಿನ್ನತೆಯ ಗುರುತು ಸಿಗದಿರಲಿ,

ನಮ್ಮ ಮಕ್ಕಳ, ಮೊಮ್ಮಕ್ಕಳ, ಮರಿಮಕ್ಕಳ ಕಾಲಕ್ಕೆ, ಶಾಸ್ತ್ರಿ, ಮಹಮದ್, ಗೌಡ,ಇಕ್ಬಾಲ್, ಶರ್ಮ, ಗೌಸ್, ಡೇವಿಡ್, ಆಚಾರ್ಯ, ಭಾಷಾ,
ಈ ಹೆಸರುಗಳೇ ಮರೆಯಾಗಲಿ,

ಮಾನವತೆಯ ಜೀವ ಸಂಕುಲ ನೆನಪಿಸುವ ಹೆಸರುಗಳು ಸೃಷ್ಟಿಯಾಗಲಿ.

ಆಗ ಸಮಾನತೆಯ ಹೊಸ ಬೆಸುಗೆ ಮಾನವ ಧರ್ಮವಾಗುತ್ತದೆ,

ಆ ದಿನಗಳ ನಿರೀಕ್ಷೆಯಲ್ಲಿ ………

ಪ್ರೀತಿಯಿಂದ ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು…..

ವಿವೇಕಾನಂದ ಹೆಚ್ ಕೆ
ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.