ಐಕ್ಯತೆಯ ಸಂದೇಶ ಸಾರಿದ ಜಾತ್ರೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಜಾತ್ರೆಗಳಿಗೆ ಮಾದರಿ ಜಾತ್ರೆಯೆನಿಸಿದ ಗದುಗಿನ ತೋಂಟದಾರ್ಯ ಮಠದ ಮಹಾರಥೋತ್ಸವವು ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ರವಿವಾರ ಸಂಜೆ 6.30ಕ್ಕೆ ಚಿತ್ತಾ ನಕ್ಷತ್ರದಲ್ಲಿ ಭಕ್ತ ಜನಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು.

Advertisement

ಅಡ್ಡಪಲ್ಲಕ್ಕಿಯಲ್ಲಿ ಬಸವಣ್ಣನವರ ಹಾಗೂ ಸಿದ್ಧಲಿಂಗೇಶ್ವರರ ಭಾವಚಿತ್ರಗಳನ್ನು, ವಚನದ ಕಟ್ಟುಗಳನ್ನು ಇಟ್ಟು ಮೆರವಣಿಗೆ ಮಾಡಲಾಯಿತು. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾವಿರಾರು ಭಕ್ತರೊಂದಿಗೆ ಮೆರವಣಿಗೆಯೊಂದಿಗೆ ನಡೆದುಕೊಂಡು ಬಂದರು. ಈ ಬಾರಿ ನೂತನ ತೇರು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಸಂಡೂರ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು, ಅಮೀನಡ ಗಚ್ಚಿನಮಠದ ಪೂಜ್ಯ ಶಂಕರ ರಾಜೇಂದ್ರ ಮಹಾಸ್ವಾಮಿಗಳು, ರಟಕಲ್ಲದ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು, ರೋಜಾ ಹಿರೇಮಠದ ಕೆಂಚಬಸವ ಮಹಾಸ್ವಾಮಿಗಳು, ಕಮತಗಿಯ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಮಹಾಸ್ವಾಮಿಗಳು, ಬಸವಬೆಳವಿಯ ಪೂಜ್ಯ ಶರಣಬಸವದೇವರು, ದೆಹೆಲಿಯ ಮಹಾಂತದೇವರು, ಬೇಲೂರ-ಬಾದಾಮಿ ಗುರುಬಸವೇಶ್ವರಮಠದ ಮಹಾಂತ ಮಹಾಸ್ವಾಮಿಗಳು, ಸಿಂದಗಿಯ ಪಾಠಶಾಲೆಯ ಶಿವಾನಂದ ಸ್ವಾಮಿಗಳು, ಯಶವಂತನಗರದ ಪೂಜ್ಯ ಗಂಗಾಧರ ಮಹಾಸ್ವಾಮಿಗಳು ಮುಂತಾದ ಹರಗುರುಚರಮೂರ್ತಿಗಳು ಭಾಗವಹಿಸಿದ್ದರು. 10ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡವು.

ತೊಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ, ಉಪಾಧ್ಯಕ್ಷರಾದ ಕರವೀರಯ್ಯ ಎಸ್.ಕೋರಿಮಠ, ಪ್ರೊ. ಡಿ.ಜಿ. ಜೋಗಣ್ಣವರ, ಶೈಲಾ ಕೋಡೆಕಲ್ಲ, ಕಾರ್ಯದರ್ಶಿಗಳಾದ ಶಿವಪ್ಪ ಕತ್ತಿ, ಸಹ ಕಾರ್ಯದರ್ಶಿಗಳಾದ ದಶರಥರಾಜ ಜಿ.ಕೊಳ್ಳಿ, ಸಿದ್ಧರಾಮಪ್ಪ ಗೊಜನೂರ, ಸಂಘಟನಾ ಕಾರ್ಯದರ್ಶಿ ನಾಗಪ್ಪ ಸವಡಿ, ಕೋಶಾಧ್ಯಕ್ಷರಾದ ವೀರಣ್ಣ ಗೊಡಚಿ, ರಾಜಶೇಖರ ಎಸ್.ಲಕ್ಕುಂಡಿ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ವ್ಯವಸ್ಥಾಪಕರಾದ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ ಸೇರಿದಂತೆ ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘದ ಸದಸ್ಯರು ಹಾಗೂ ತೋಂಟದಾರ್ಯ ಮಠದ ಸದ್ಭಕ್ತರು ಪಾಲ್ಗೊಂಡಿದ್ದರು.

ರಥೋತ್ಸವಕ್ಕೂ ಮುನ್ನ ಪರಂಪರೆಯಂತೆ ಶ್ರೀ ವೀರನಾರಾಯಣ ರಸ್ತೆಯಲ್ಲಿರುವ ಎಸ್.ಎಸ್. ಕಳಸಾಪೂರಶೆಟ್ರ ನಿವಾಸದಿಂದ ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ ಡಾ. ತೋಂಟದ ಸಿದ್ಧರಾಮ ಶ್ರೀಗಳು ಶ್ರೀಮಠಕ್ಕೆ ಆಗಮಿಸಿದರು. ರಸ್ತೆಯುದ್ದಕ್ಕೂ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯದವರು ಬಸವೇಶ್ವರ ಮತ್ತು ಸಿದ್ಧಲಿಂಗೇಶ್ವರ ವಚನಕಟ್ಟುಗಳಿಗೆ ಹಾಗೂ ಪೂಜ್ಯರಿಗೆ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಮೆರವಣಿಗೆ ತಂಡಗಳಿಗೆ ವರ್ತಕರು ಕುಡಿಯಲು ತಂಪುಪಾನಿಯಗಳನ್ನು ವಿತರಿಸಿದ್ದು ಐಕ್ಯತೆಯ ಸಂದೇಶವನ್ನು ಸಾರಿತು.


Spread the love

LEAVE A REPLY

Please enter your comment!
Please enter your name here