ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಶಾಲಾ ಶೌಚಾಲಯಗಳ ಸ್ಥಿತಿಗತಿಗಳ ನೈಜ ವರದಿ ನೀಡಬೇಕು. ಜೊತೆಗೆ ಶಾಲಾ ಹಂತದಲ್ಲಿ ಶಾಲಾ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಬೇಕು. ಮೇ ಅಂತ್ಯದೊಳಗಾಗಿ ಶೌಚಾಲಯಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿನ ಶಾಲಾ ಶೌಚಾಲಯ ಕುರಿತು ಸಭೆ ಜರುಗಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿನ ಹಾಗೂ ಶೌಚಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. 10 ಸಾವಿರ ರೂ. ಒಳಗೆ, 10-50 ಸಾವಿರ ರೂ ಒಳಗಡೆ, 50-70 ಸಾವಿರ ರೂ ಒಳಗಡೆ ಹಾಗೂ 70 ಸಾವಿರ ರೂ.ನಿಂದ 1 ಲಕ್ಷ ರೂ ಒಳಗೆ ದುರಸ್ತಿ ವೆಚ್ಚ ಇರುವ ಶಾಲಾ ಶೌಚಾಲಯಗಳ ಪಟ್ಟಿಯನ್ನು ತಯಾರಿಸಿ ಎಪ್ರಿಲ್ 18ರಂದು ಜರುಗುವ ಸಭೆಗೆ ಹಾಜರಾಗುವಂತೆ ನಿರ್ದೇಶಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಶೌಚಾಲಯಗಳ ವಸ್ತುಸ್ಥಿತಿ ಕುರಿತು ನೀಡಿದ ವರದಿ ಸಮರ್ಪಕವಾಗಿಲ್ಲ. ಈಗಿರುವ ಶೌಚಾಲಯಗಳ ಸಣ್ಣ ಪುಟ್ಟ ವರದಿ ಮಾಡಿದರೆ ಎಷ್ಟು ಸರಿ ಹೋಗುತ್ತದೆ ಎನ್ನುವುದರ ಕುರಿತು ಮಾಹಿತಿ ನೀಡುವಂತೆ ಹೇಳಿದರು. ಶಾಲೆಗಳಲ್ಲಿ ಶೌಚಾಲಯಗಳೇ ಇರದ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು. ಶೌಚಾಲಯಗಳಿದ್ದೂ ನೀರಿನ ಸಂಪರ್ಕವಿರದ ಶೌಚಾಲಯಗಳ ಪಟ್ಟಿಯನ್ನು ಮುಂದಿನ ಸಭೆಗೆ ತರುವಂತೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಶೌಚಾಲಯಗಳ ನಿರ್ವಹಣೆಗೆ ನೀಡಿರುವ ಅನುದಾನ ವೆಚ್ಚವಾಗಿಯೂ ಸಹ ಶೌಚಾಲಯ ಸುಸ್ಥಿತಿಯಲ್ಲಿಲ್ಲ ಎಂದರೆ ವಿನಾಕಾರಣ ಶೌಚಾಲಯ ನಿರ್ವಹಣಾ ವೆಚ್ಚ ಪೋಲಾಗುತ್ತಿದೆ ಎಂದೆನಿಸುತ್ತದೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮಂಜಸ ಉತ್ತರ ನಿರೀಕ್ಷಿಸಲಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿದರು. ತಾಲೂಕಾವಾರು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಶಾಲಾ ಶೌಚಾಲಯಗಳ ಸಂಖ್ಯೆ ಹಾಗೂ ನಿರ್ವಹಣೆ ಕುರಿತಂತೆ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಡಾ. ಎನ್.ಎಚ್. ನಾಗನೂರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೊಟ್ಟೂರ, ಡಯಟ್ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ ಸೇರಿದಂತೆ ಶಿಕ್ಷಣ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು, ಬಿಆರ್‌ಸಿ, ಸಿಆರ್‌ಸಿ ಅಧಿಕಾರಿಗಳು ಇದ್ದರು.
ಜಿಲ್ಲೆಯಲ್ಲಿನ ನಗರದ ಹಾಗೂ ಗ್ರಾಮೀಣ ಪ್ರದೇಶಗಳ ಶಾಲಾ ಮೂತ್ರಾಲಯ ಹಾಗೂ ಶೌಚಾಲಯಗಳ ಸ್ಥಿತಿಗತಿಗಳನ್ನು ಪಿಪಿಟಿ ಮೂಲಕ ವೀಕ್ಷಣೆ ಮಾಡಿ ನಂತರ ಸಚಿವರು ಮಾತನಾಡಿ, ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ ಶೌಚಾಲಯಗಳ ದುರಸ್ತಿ ಬಗೆಗಿನ ಪಟ್ಟಿಯನ್ನು ಮಾಡಬೇಕು. ಶಾಲಾ ಶೌಚಾಲಯ ಹಾಗೂ ಮೂತ್ರಾಲಯಗಳಿಗೆ ನೀರಿನ ಪೂರೈಕೆ ಸಮಸ್ಯೆ ಇರುವ ಕುರಿತು ಪಟ್ಟಿ ಮಾಡಿ ಒದಗಿಸಬೇಕೆಂದು ಸಚಿವ ಎಚ್.ಕೆ. ಪಾಟೀಲ ಸೂಚಿಸಿದರು.