ಇಸ್ಲಾಮಾಬಾದ್: ನಾವು ನಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ನಡುವಿನ ವ್ಯತ್ಯಾಸವನ್ನು ಹೇಳಿಕೊಡಬೇಕು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನಿರ್ ಭಾರತವನ್ನು ಕೆಣಕಿದ್ದಾರೆ. ಭಾಷಣವೊಂದರಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು ನಾವು ಹಿಂದೂಗಳಿಗಿಂತ ಪ್ರತಿಯೊಂದು ವಿಷಯದಲ್ಲೂ ಭಿನ್ನರಾಗಿದ್ದೇವೆ ಎಂದು ನಂಬಿದ್ದರು.
ನಮ್ಮ ಧರ್ಮ, ಆಚರಣೆ, ಸಂಪ್ರದಾಯ, ಆಲೋಚನೆ ಮತ್ತು ಗುರಿಗಳು ಬೇರೆ ಆದ್ದರಿಂದಲೇ, ದ್ವಿರಾಷ್ಟ್ರ ಪರಿಕಲ್ಪನೆ ಮೊಳಕೆಯೊಡೆಯಿತು. ಈಗಲೂ ಪಾಕಿಸ್ತಾನವು ದ್ವಿರಾಷ್ಟ್ರ ಸಿದ್ಧಾಂತದ ತಳಹದಿಯ ಮೇಲೆ ನಿಂತಿದೆ. ಇದರ ಮಹತ್ವ ಎಂದಿಗೂ ಕಡಿಮೆಯಾಗಬಾರದು. ಇದಕ್ಕಾಗಿ ನಾವು ನಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ನಡುವಿನ ವ್ಯತ್ಯಾಸವನ್ನು ಹೇಳಿಕೊಡಬೇಕು ಎಂದು ಹೇಳಿದ್ದಾರೆ.
ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೊಡ್ಡ ವ್ಯತ್ಯಾಸವಿದೆ ಅಂತ ನಮ್ಮ ಮಕ್ಕಳಿಗೆ ತಿಳಿಸಬೇಕು. ನಮ್ಮ ಧರ್ಮ ಬೇರೆ, ನಮ್ಮ ಆಚಾರಗಳು ಬೇರೆ, ನಮ್ಮ ಸಂಪ್ರದಾಯಗಳು ಬೇರೆ, ನಮ್ಮ ಆಲೋಚನೆಗಳು ಬೇರೆ, ನಮ್ಮ ಮಹತ್ವಾಕಾಂಕ್ಷೆಗಳು ಬೇರೆ, ಅಲ್ಲಿಯೇ ಎರಡು ರಾಷ್ಟ್ರ ಸಿದ್ಧಾಂತದ ಬುನಾದಿ ಹಾಕಲಾಯಿತು.
ನಾವು ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ ಎಂದು ನಮ್ಮ ಮಕ್ಕಳಿಗೆ ತಿಳಿಸಿ. ಇಸ್ಲಾಮಿಕ್ ಗಣರಾಜ್ಯದ ಸೃಷ್ಟಿಗೆ ಇದು ಮುಖ್ಯ ಕಾರಣ ಎಂಬ ಸತ್ಯ ಅವರಿಗೆ ಗೊತ್ತಾಗಲಿ. 1947ರಲ್ಲಿ ಪಾಕಿಸ್ತಾನ ರಚನೆಗೆ ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವೇ ಕಾರಣ ಎಂಬುದನ್ನು ನಮ್ಮ ಭವಿಷ್ಯದ ಪೀಳಿಗೆ ಮರೆಯಬಾರದು ಎಂದು ಮುನೀರ್ ಹೇಳಿಕೆ ನೀಡಿದ್ದಾರೆ.



