ಸರ್ಕಾರಿ ಕಾಲೇಜುಗಳ ಉಳಿವಿಗೆ ಶ್ರಮವಹಿಸಿ: ಡಿವೈಎಸ್ಪಿ ವಿಜಯ ಬಿರಾದಾರ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಎಸ್‌ಎಸ್‌ಎಲ್‌ಸಿ ಪೂರ್ಣಗೊಳ್ಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸಾಕಷ್ಟು ದೂರವಾಣಿ ಕರೆಗಳು ಬರುತ್ತವೆ. ಇದಕ್ಕೆ ಮನಸೋತು ಪಾಲಕರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಸರ್ಕಾರಿ ಪದವಿಪೂರ್ವ, ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಮುಂದಿನ ದಿನಮಾನಗಳಲ್ಲಿ ಸರ್ಕಾರಿ ಕಾಲೇಜುಗಳು ಮುಚ್ಚುವ ಹಂತಕ್ಕೆ ತಲುಪಬಹದು. ಆದ್ದರಿಂದ ಸರ್ಕಾರಿ ನೌಕರರು ಸರ್ಕಾರಿ ಶಾಲೆ-ಕಾಲೇಜುಗಳ ಉಳಿವಿಗೆ ಶ್ರಮ ವಹಿಸುವುದು ಅವಶ್ಯವಾಗಿದೆ ಎಂದು ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಹೇಳಿದರು.

Advertisement

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಕರ್ನಾಟಕ ಲೋಕಾಯುಕ್ತದಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಶಾಲಾ-ಕಾಲೇಜು ಪ್ರಾಚಾರ್ಯರು ಮತ್ತು ಸಿಬ್ಬಂದಿಗಳು ಜೊತೆಗೆ ನೌಕರರು ಎಸ್‌ಎಸ್‌ಎಲ್‌ಸಿ ಪೂರೈಸಿದ ಮಕ್ಕಳ ಮಾಹಿತಿಯನ್ನು ಪಡೆದುಕೊಂಡು ಅವರ ಪಾಲಕರಿಗೆ ಸರ್ಕಾರಿ ಕಾಲೇಜಿಗಳಿಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಪ್ರೇರೇಪಿಸಬೇಕು. ಪ್ರಾಚಾರ್ಯರ ಹಾಗೂ ಉಪನ್ಯಾಸಕ ಕೆಲಸ ಕೇವಲ ಪಾಠ ಮಾಡುವುದಷ್ಟೇ ಅಲ್ಲ. ಮಕ್ಕಳ ಪ್ರವೇಶದ ಬಗ್ಗೆ ಕೂಡ ಕಾಳಜಿ ವಹಿಸಬೇಕು. ನರೇಗಲ್ಲ ಪಟ್ಟಣದಲ್ಲಿ ಪದವಿಪೂರ್ವ ಹಾಗೂ ಪ್ರಥಮದರ್ಜೆ ಕಾಲೇಜುಗಳಿದ್ದು, ಅದಕ್ಕೆ ಪೂರಕವಾಗಿ ಅನುಭವಿ ಉಪನ್ಯಾಸಕರು ಹಾಗೂ ಉತ್ತಮ ಪರಿಸರ ಲಭ್ಯವಿದೆ. ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದಲ್ಲಿ ನೇರವಾಗಿ ಸಂಬಂಧಿಸಿದ ಇಲಾಖೆಗೆ ಅರ್ಜಿ ಬರೆದು ಪಡೆದುಕೊಳ್ಳಬೇಕು ಎಂದರು.

ಸರ್ಕಾರದ ಯಾವುದೇ ಇಲಾಖೆಯ ಅನುದಾನ ಶಾಲಾ-ಕಾಲೇಜು, ಹಾಸ್ಟೆಲ್, ಪಟ್ಟಣ ಪಂಚಾಯಿತಿ, ಹೆಸ್ಕಾಂ, ಪಶು ವೈದ್ಯಕೀಯ, ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಯಾವುದೇ ಸಾಮಾಗ್ರಿಗಳ ಪೂರೈಕೆ ಅಥವಾ ಕಾಮಗಾರಿ ಕೈಗೊಂಡಲ್ಲಿ ಅವುಗಳನ್ನು ತಾವು ಅಧೀನಕ್ಕೆ ಪಡೆದುಕೊಳ್ಳುವ ಮುಂಚೆ ಅಂದಾಜು ಪ್ರತಿಯಲ್ಲಿ ಇರುವ ಕೆಲಸಗಳು/ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕಳಪೆ ಸಾಮಾಗ್ರಿಗಳ ವಿತರಣೆ ಹೆಚ್ಚಾಗಿದ್ದು, ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಇಂತಹ ಕಾರ್ಯಕ್ಕೆ ಅಧಿಕಾರಿಗಳು ಕೈಜೋಡಿಸಿದರೆ ಯಾವುದೇ ಮುಲಾಜಿಲ್ಲದೇ ದೂರನ್ನು ದಾಖಲಿಸಿಕೊಂಡು ತನಿಖೆಗೆ ಮುಂದಾಗಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ 7 ದೂರುಗಳನ್ನು ಸ್ವೀಕರಿಸಲಾಯಿತು. ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ತಾ.ಪಂ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಉಪತಹಸೀಲ್ದಾರ ಸಕ್ರಪ್ಪ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪಟ್ಟಣದಲ್ಲಿ ಸಾರ್ವಜನಿಕರ ಉದ್ದೇಶಕ್ಕಾಗಿರುವ ಉದ್ಯಾನವನವನ್ನು ಪ.ಪಂ ವತಿಯಿಂದ ಶೀಘ್ರದಲ್ಲಿ ಸ್ವಚ್ಛಗೊಳಿಸಿದ ಅನುಕೂಲ ಮಾಡಬೇಕು. ಹೆಸ್ಕಾಂನಿಂದ ದುರಸ್ತಿ ಕಾರ್ಯಕ್ಕೆಂದು ರೈತರಿಂದ ಪಡೆದುಕೊಂಡಿರುವ 4 ಟಿಸಿಗಳ ಬಗ್ಗೆ ಮೂರು ದಿನದಲ್ಲಿ ಮಾಹಿತಿಯನ್ನು ನೀಡಬೇಕು. ಕಳಪೆ ಕಾಮಗಾರಿಗಳ ಬಗ್ಗೆ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು. ಅನೈತಿಕ ಚಟುವಟಿಕೆಗಳು ನಡೆಯುವ ಸ್ಥಳಕ್ಕೆ ಹೋಗಿ ಪೊಲೀಸ್ ಸಿಬ್ಬಂದಿಗಳು ದಂಡ ಹಾಕಲು ಮುಂದಾಗಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಸೂಚಿಸಿದರು.


Spread the love

LEAVE A REPLY

Please enter your comment!
Please enter your name here