ಮೈನವಿರೇಳಿಸಿದ ಕುಸ್ತಿ ಪಂದ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಕೋಡಿಯಲ್ಲಮ್ಮ ದೇವಿ ದೇವಸ್ಥಾನದ ಜಾತ್ರಾಮಹೋತ್ಸವ ಅಂಗವಾಗಿ ಬುಧವಾರ ದೇವಸ್ಥಾನದ ಬಯಲಿನಲ್ಲಿ ಅಂತಿಮ ಹಂತದ ಮುಕ್ತ ಕುಸ್ತಿ ಪಂದ್ಯಾವಳಿಗಳು ನಡೆದವು. ಮಳೆಯ ಆತಂಕದ ನಡುವೆಯೂ ಪಂದ್ಯಾವಳಿಗಳು ನಿರಾಂತಂಕವಾಗಿ ಜರುಗಿ ಪೈ.ನಿಂಗಪ್ಪ ಬೊಮ್ಮನಹಳ್ಳಿ ವಿಜೇತರಾಗಿ ಹೊರಹೊಮ್ಮಿದರು.

Advertisement

ಫೈನಲ್ ವಾರಗಿ ಪೈಕಿ ಕುಸ್ತಿಯಲ್ಲಿ ಕಣಗಿನಹಾಳದ ಬಸವರಾಜರನ್ನು ಸೋಲಿಸಿದ ಬೊಮ್ಮನಹಳ್ಳಿಯ ನಿಂಗಪ್ಪ ಬೆಳ್ಳಿ ಕಡಗ ಮತು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ನಂತರ ನಡೆದ ಪರಸಿ ಪೈಕಿ ಕುಸ್ತಿಯಲ್ಲಿ ಹಿರೇಕೆರೂರದ ಕಿರಣ ಪೈಲ್ವಾನ್‌ರೊಂದಿಗೆ ಸೆಣಸಿ ಚಿತ್ ಮಾಡುವ ಮೂಲಕ ಬೊಮ್ಮನಹಳ್ಳಿಯ ಪೈಲ್ವಾನ್ ನಿಂಗಪ್ಪ ವಿಜೇತರಾಗಿ ಬೆಳ್ಳಿ ಕಡಗ ಧರಿಸಿಕೊಂಡರು.

ಮುಸ್ಸಂಜೆಯಲ್ಲಿ ನಡೆದ ವಾರಗಿ ಪೈಕಿ-ಪರ್ಸಿ ಪೈಕಿ ಕುಸ್ತಿ ಅಂತಿಮ ಪಂದ್ಯಾವಳಿಯಲ್ಲಿ ಸೆಣಸಿದ ಕಲಿಗಳ ವಿವಿಧ ಭಂಗಿ, ಪಟ್ಟು, ಕರಾಮತ್ತುಗಳು ನೋಡುಗರ ಮೈನವಿರೇಳಿಸುವಂತೆ ಮಾಡಿದವು. 3 ದಿನ ನಡೆದ ಕುಸ್ತಿ ಸೆಣಸಾಟದಲ್ಲಿ ಧಾರವಾಡ, ಹುಬ್ಬಳ್ಳಿ, ಹಾವೇರಿ, ಕೊಲ್ಲಾಪುರ, ಗುಲಬರ್ಗಾ, ಹೊನ್ನಳ್ಳಿ, ಹಿರೇಕೆರೂರ, ಬಾಲೆಹೊಸೂರ, ಬೊಮ್ಮನಹಳ್ಳಿ, ಲಕ್ಕುಂಡಿ, ಜಮಖಂಡಿ, ಕುರ್ತಕೋಟಿ, ಜಕ್ಕಲಿ, ಮುಳಗುಂದ, ಕಣಗಿನಹಾಳ, ಲಕ್ಷ್ಮೇಶ್ವರ ಮತ್ತಿತರರ ಕಡೆಗಳಿಂದ 50 ಕ್ಕೂ ಹೆಚ್ಚು ಕುಸ್ತಿ ಪೈಲ್ವಾನರು ಭಾಗವಹಿಸಿದ್ದರು.

ಸಂಜೆ ಗೆಲುವು ಸಾಧಿಸಿದ ಕುಸ್ತಿ ಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅತಿಥಿಗಳು, ಕುಸ್ತಿ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಜಾನಪದ ಶೈಲಿಯ ಗ್ರಾಮೀಣ ಕ್ರೀಡೆಯಾಗಿದೆ. ನಮ್ಮ ಸಂಸ್ಕತಿ, ಪರಂಪರೆಯ ಪ್ರತೀಕವಾದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿರುವ ಈ ಕುಸ್ತಿ ಪಂದ್ಯಾವಳಿಯನ್ನು ದೇವಸ್ಥಾನ ಸೇವಾ ಕಮಿಟಿ, ಭಕ್ತಮಂಡಳಿ, ಪಟ್ಟಣದ ಹಿರಿಯರು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.

ನಿಂಗಪ್ಪ ವಿಜೇತರಾಗುತ್ತಿದ್ದಂತೆ ಕುಸ್ತಿ ಅಭಿಮಾನಿಗಳು, ಯುವಕರು ಮೈದಾನಕ್ಕೆ ನುಗ್ಗಿ ಪೈಲ್ವಾನರನ್ನು ಹೊತ್ತು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶ್ರೀ ಕೋಡಿಯಲ್ಲಮ್ಮ ದೇವಿ ದೇವಸ್ಥಾನದ ಕಮಿಟಿಯವರು, ಓಣಿಯ ಹಿರಿಯರು, ಪೈಲ್ವಾನರು ಇದ್ದರು.


Spread the love

LEAVE A REPLY

Please enter your comment!
Please enter your name here