ಶಾಲಾ ಶೌಚಾಲಯಗಳ ಗುಣಮಟ್ಟ ಉತ್ತಮವಾಗಿರಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿರುವ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿರಬೇಕು. ಸಣ್ಣಪುಟ್ಟ ದುರಸ್ತಿ ಅಗತ್ಯವಿದ್ದಲ್ಲಿ ಶಾಲೆ ಆರಂಭವಾಗುವುದಕ್ಕೂ ಮೊದಲು ದುರಸ್ತಿಗೊಳಿಸಲು ಸೂಕ್ತ ಕ್ರಮ ವಹಿಸಬೇಕೆಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಗದಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಜಿಲ್ಲೆಯ ಶಾಲಾ ಶೌಚಾಲಯಗಳ ಕುರಿತು ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಶಾಲಾ ಶೌಚಾಲಯಗಳ ನಿರ್ವಹಣೆಗಾಗಿ ಶಿಕ್ಷಣ ಇಲಾಖೆಯಿಂದ ಅನುದಾನ ನೀಡಲಾಗುತ್ತದೆಯಲ್ಲದೆ, ಎಸ್.ಡಿ.ಎಂ.ಸಿಗಳ ಅನುದಾನ ಬಳಕೆ ಮಾಡಿಕೊಂಡು ಶಾಲಾ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿರುವಂತೆ ನೋಡಿಕೊಳ್ಳಬೇಕು ಎಂದರಲ್ಲದೆ, ಶೌಚಾಲಯಗಳನ್ನು 10-15 ಸಾವಿರ ಒಳಗಡೆ ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿಯಾಗಿ ಅಗತ್ಯವಿರುವ ಶೌಚಾಲಯಗಳ ಕುರಿತು ಕ್ರಮ ವಹಿಸಲಾಗುವುದು. ಹೆಚ್ಚುವರಿ ಶೌಚಾಲಯ ನಿರ್ಮಿಸಲು ಮಾಡೆಲ್ ಪ್ಲಾನಿಂಗ್ ಶೀಘ್ರವೇ ಸಿದ್ಧಗೊಳಿಸಿ ಮಂಡಿಸಬೇಕು. ಶಾಲಾ ಶಿಕ್ಷಕರಿಗೆ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸುವ ಮೂಲಕ ಎಲ್ಲರೂ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಶಾಲೆಗಳ ಆವರಣದಲ್ಲಿ ಸಿಸಿಟಿವಿ ಅಳವಡಿಕೆ ಮಾಡುವ ಕುರಿತಂತೆ ಸಚಿವರು ಚರ್ಚಿಸಿದರು.

ಶಿಕ್ಷಕರ ಹಾಜರಾತಿ ಕುರಿತಂತೆ ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವ ಮೂಲಕ ಹಾಜರಾತಿ ಸರಿಯಾದ ಸಮಯಕ್ಕೆ ಆಗುವಂತೆ ಕ್ರಮ ಆಗಬೇಕಿದೆ. ಈ ಬಗ್ಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನ ಹರಿಸುವಂತೆ ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಡಾ. ಎನ್.ಎಚ್. ನಾಗನೂರ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಡಯಟ್ ಪ್ರಾಚಾರ್ಯ ಜಿಎಲ್ ಬಾರಾಟಕ್ಕೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಿದ್ದರು.

ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳು ಶುದ್ಧ ನೀರು ಕುಡಿಯುವಂತಾಗಬೇಕು. ಈ ಕುರಿತು ಶುದ್ಧ ನೀರಿನ ಘಟಕ ಸ್ಥಾಪನೆಗೆ ಅಗತ್ಯವಿರುವ ಕ್ರಮವಹಿಸಲು ಸೂಚಿಸಿದ ಸಚಿವರು, ಈಗಾಗಲೇ ಓದಿನ ಮನೆ ಯೋಜನೆ ಜಾರಿಯಲ್ಲಿದ್ದು, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಚಿವ ಡಾ. ಎಚ್.ಕೆ. ಪಾಟೀಲ ನಿರ್ದೇಶನ ನೀಡಿದರು.


Spread the love

LEAVE A REPLY

Please enter your comment!
Please enter your name here