ವಿಜಯಸಾಕ್ಷಿ ಸುದ್ದಿ, ಧಾರವಾಡ: ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತದಲ್ಲಿ 107 ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರದ ರೂ. 180 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಈಗಾಗಲೇ ಸುಮಾರು ರೂ. 60 ಕೋಟಿ ವೆಚ್ಚದ 40 ಕೆರೆಗಳನ್ನು ತುಂಬುವ ಕಾರ್ಯ ಸಂತೋಷ್ ಲಾಡ್ ಅವರ ಅವಿರತ ಪ್ರಯತ್ನದಿಂದ ಪೂರ್ಣಗೊಂಡಿದ್ದು, ಇದೀಗ ಎರಡನೇ ಹಂತಕ್ಕೆ ಸರ್ಕಾರ ಹಣ ನೀಡಿದೆ. ಬಹು ನಿರೀಕ್ಷಿತ ಯೋಜನೆಗೆ ಸರ್ಕಾರ ಸ್ಪಂದಿಸಿರುವುದಕ್ಕೆ ಅನ್ನದಾತರು ಖುಷಿಗೊಂಡಿದ್ದು, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಕಲಘಟಗಿ ತಾಲೂಕಿನ ಮಹತ್ವಾಕಾಂಕ್ಷಿ ಬೇಡ್ತಿ ನದಿಯ ಏತ ನೀರಾವರಿ ಯೋಜನೆಯ ಎರಡನೇ ಹಂತದ 107 ಕೆರೆಗಳನ್ನು ತುಂಬುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ಕೊಡಿಸಲು ಸಚಿವ ಲಾಡ್ ಸಾಕಷ್ಟು ಶ್ರಮಿಸಿದ್ದರು. ಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಂತೋಷ್ ಲಾಡ್ ತಾಲೂಕಿನ ಅನ್ನದಾತರಿಗೆ ಕೊಟ್ಟ ಮಾತನ್ನು ಮತ್ತೊಮ್ಮೆ ಉಳಿಸಿಕೊಂಡಿದ್ದಾರೆ.
ಸಿಎಂ, ಡಿಸಿಎಂಗೆ ಧನ್ಯವಾದ ತಿಳಿಸಿದ ಲಾಡ್: ಬಹು ನಿರೀಕ್ಷಿತ ಯೋಜನೆಯ ಸಾಕಾರಕ್ಕೆ ಸಹಕಾರ ನೀಡುತ್ತಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ, ಉಪ ಮುಖ್ಯಮಂತ್ರಿಗಳು ಹಾಗೂ ಬೃಹತ್ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಲಾಡ್ ಧನ್ಯವಾದ ತಿಳಿಸಿದ್ದಾರೆ.
ಸಚಿವರಿಗೆ ಅನ್ನದಾತರಿಂದ ಕೃತಜ್ಞತೆ: ಸಚಿವ ಲಾಡ್ ಅವರ ಅವಿರತ ಶ್ರಮದಿಂದ ಈ ಕಾರ್ಯ ಸಾಕಾರವಾಗಿದ್ದು, ಅಸಂಖ್ಯಾತ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಲಘಟಗಿಯಂತಹ ನೀರಿನ ಕೊರತೆಯ ತಾಲೂಕಿಗೆ ಇಂತಹ ಯೋಜನೆ ಅವಶ್ಯವಿತ್ತು. ಇದೀಗ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದೆ. ಆಧುನಿಕ ಭಗೀರಥನಂತೆ ಸಚಿವ ಲಾಡ್ ನಮಗಾಗಿ ದುಡಿದಿದ್ದಾರೆ ಎಂದು ಕಲಘಟಗಿಯ ರೈತರು ಖುಷಿ ವ್ಯಕ್ತಪಡಿಸಿದ್ದಾರೆ.
ಧಾರವಾಡ ಜಿಲ್ಲೆಯ ಗ್ರಾಮೀಣ ಹಾಗೂ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಶುಕ್ರವಾರ ವಿಕಾಸಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮವನ್ನು ಅನುಸರಿಸಬೇಕು. ನೀರು ಪೂರೈಸಲು ವಿದ್ಯುತ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನವಲಗುಂದ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರೆಡ್ಡಿ ಮಾತನಾಡಿ, ಕರೆಂಟ್‌ನಲ್ಲಿ ಸೊಲಾರ್ ಸಿಸ್ಟಮ್‌ನ್ನು ಅಳವಡಿಸಿಕೊಂಡರೆ ಒಳ್ಳೆಯದು. ವಿದ್ಯುತ್ ಮತ್ತು ಸೊಲಾರ್ ಎರಡರ ಬಳಕೆಯಿಂದ ಕರೆಂಟ್‌ನ ಅಭಾವವನ್ನು ತಪ್ಪಿಸಬಹುದು ಹಾಗೂ ಇದನ್ನು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರಲು ಹೇಳಿದರು.