ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಶಿವಮೊಗ್ಗ, ಬೀದರ್ ಜಿಲ್ಲೆಯಲ್ಲಿ ಜನಿವಾರ ಧರಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದನ್ನು ಜಿಲ್ಲಾ ಬ್ರಾಹ್ಮಣ ಸಮಾಜ ಖಂಡಿಸುತ್ತದೆ. ತಪ್ಪೆಸಗಿದವರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೆಸರದ ಸಂಗತಿಯಾಗಿದೆ. ಬ್ರಾಹ್ಮಣ ಸಮಾಜದವರು ಶಾಂತ ಸ್ವಭಾವದವರಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ರಾಹ್ಮಣ ವಿದ್ಯಾರ್ಥಿಗಳ ಪರೀಕ್ಷೆಗೆ ತಡೆಯೊಡ್ಡಿದ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಬೇಕು. ಬೀದರ್‌ನಲ್ಲಿ ಜನಿವಾರ ತಗೆಯಲು ನೀರಾಕರಿಸಿದ್ದಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಖಂಡನೀಯ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಒಂದಿಲ್ಲೊಂದು ರೀತಿಯಲ್ಲಿ ನಡೆಯುತ್ತಿದೆ. ಸೌಮ್ಯ ಸ್ವಭಾವದವರಾದ ನಮ್ಮನ್ನು ಪದೇ ಪದೇ ಕೆಣಕಬಾರದು ಅಂತ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಜಾತಿ, ಆದಾಯ ಪ್ರಮಾಣ ಪತ್ರವನ್ನು ಬ್ರಾಹ್ಮಣರಿಗೆ ಕೇವಲ ಒಂದು ವರ್ಷಕ್ಕೆ ಮಾತ್ರ ನೀಡಲಾಗುತ್ತಿದೆ. ಜಾತಿ ಪ್ರಮಾಣ ಪತ್ರವನ್ನು ಕನಿಷ್ಠ ಐದು ವರ್ಷಕ್ಕೆ ನೀಡಬೇಕು ಹಾಗೂ ಜಾತಿ ಗಣತಿಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಅನ್ಯಾಯವಾಗಿದೆ. ರಾಜ್ಯಾದ್ಯಂತ ಬ್ರಾಹ್ಮಣರ ಸಮಾಜ 45ರಿಂದ 50 ಲಕ್ಷ ಜನಸಂಖ್ಯೆ ಇದ್ದು, ಜಾತಿ ಗಣತಿಯಲ್ಲಿ ಕೇವಲ 14 ಲಕ್ಷ ಎಂದು ತೋರಿಸಲಾಗಿದೆ. ಈ ವರದಿಯನ್ನು ನಾವು ನಿರಾಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯಾದ್ಯಂತ ಬ್ರಾಹ್ಮಣ ಸಂಘದಿಂದ ಗಣತಿ ಮಾಡಲಿದ್ದೇವೆ ಎಂದು ವೆಂಕಟೇಶ ಕುಲಕರ್ಣಿ ಹೇಳಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ದತ್ತಣ್ಣ ಜೋಶಿ, ಕೃಷ್ನಾಜೀ ಕುಲಕರ್ಣಿ, ಅನಿಲ ವೈದ್ಯ, ನಾಗರಾಜ ಗ್ರಾಮಪುರೋಹಿತ, ಗಿರೀಶ್ ಕುಲಕರ್ಣಿ, ಮಂಜುನಾಥ ಭಟ್, ಅಪ್ಪಣ್ಣಭಟ್ ಸೊರಟೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಂಗ್ರೆಸ್ ವಿರುದ್ಧ ಆಕ್ರೋಶ
ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನೀರಾಕರಣೆ ಮಾಡಿದ ಘಟನೆಯನ್ನು ಖಂಡಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮಾಜವನ್ನು ಅವಮಾನ ಮಾಡುವುದು ರೂಢಿಯೇ ಆಗಿದೆ. ಬ್ರಾಹ್ಮಣರ ಭಾವನೆಗೆ ದಕ್ಕೆ ತರುವ ಕೆಲಸ ಹೆಚ್ಚಾಗುತ್ತಿದೆ. ಜಾತಿ ಗಣತಿಯಲ್ಲೂ ರಾಜ್ಯ ಸರ್ಕಾರ ಬ್ರಾಹ್ಮಣರಿಗೆ ಮೋಸ ಮಾಡಿದೆ. ರಾಜ್ಯದಲ್ಲಿ ಮೊತ್ತಮ್ಮೆ ಜಾತಿ ಗಣತಿ ನಡೆಯಲಿ.
– ಗುರುರಾಜ್ ಬಳಗಾನೂರ.
ಹಿರಿಯ ಮುಖಂಡ,
ಜಿಲ್ಲಾ ಬ್ರಾಹ್ಮಣ ಸಮಾಜ.



