ಬೆಂಗಳೂರು:- ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ A1 ಆರೋಪಿತೆ ಪತ್ನಿ ಪಲ್ಲವಿ ತನಿಖಾಧಿಕಾರಿಗಳ ಎದುರು ಹತ್ಯೆಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಘಟನೆ ಸಂಬಂಧ ತನಿಖಾಧಿಕಾರಿಗಳ ಎದುರು ಓಂ ಪ್ರಕಾಶ್ ಪತ್ನಿ ಪಲ್ಲವಿ ಅವರು ಹೇಳಿಕೆ ನೀಡಿದ್ದು, ಅನೇಕ ಸ್ಫೋಟಕ ಅಂಶಗಳನ್ನು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇಪದೆ ಗನ್ ತಂದು ನನಗೆ, ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದರು. ಶೂಟ್ ಮಾಡುವುದಾಗಿ ಹೆದರಿಸುತ್ತಿದ್ದರು. ಬೆಳಗ್ಗೆಯಿಂದ ಬೇರೆಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿದೆ. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಗಿ ನಮ್ಮನ್ನೇ ಕೊಲೆ ಮಾಡಲು ಓಂಪ್ರಕಾಶ್ ಯತ್ನಿಸಿದ್ದರು. ನಮ್ಮ ಜೀವ ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದೆವು.
ಬಳಿಕ ಖಾರದಪುಡಿ ಹಾಗೂ ಅಡುಗೆ ಎಣ್ಣೆ ಹಾಕಿದೆವು. ಕೈಕಾಲು ಕಟ್ಟಿ ಚಾಕುವಿನಿಂದ ಚುಚ್ಚಿದ್ದೆವು ಎಂದು ಓಂ ಪ್ರಕಾಶ್ ಪತ್ನಿ ಪಲ್ಲವಿ ತನಿಖಾಧಿಕಾರಿಗಳ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಪ್ರಕರಣದಲ್ಲಿ ಪಲ್ಲವಿ ಮೊದಲ ಆರೋಪಿಯಾಗಿದ್ದಾರೆ. ಹತ್ಯೆಯಲ್ಲಿ ಮಗಳ ಪಾತ್ರದ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.