ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆಯಾದಾಗಿನಿಂದ ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ಇದರಿಂದಾಗಿ ಬಡವರ ಬದುಕು ಬೀದಿಗೆ ಬಂದಿದೆ. ಹೊರ ರಾಜ್ಯದಿಂದ ಬಂದು ನಗರದ ಕೋರ್ಟ್ ಬಳಿ ನೆಲೆ ಊರಿರುವ ಅಲೆಮಾರಿ ಕುಟುಂಬಗಳು ರಸ್ತೆ ಪಕ್ಕದಲ್ಲಿ ಕರಕುಶಲ ವ್ಯಾಪಾರ ಮಾಡುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ಆದರೆ, ಕೊರೊನಾದಿಂದಾಗಿ ಅವರು ಸಂಕಷ್ಟ ಪಡುವಂತಾಗಿತ್ತು. ಪೊಲೀಸರ ಆದೇಶದಂತೆ ಈ ಕುಟುಂಬಸ್ಥರು ತಮ್ಮ ವ್ಯಾಪಾರ – ವಹಿವಾಟು ಮೊಟಕುಗೊಳಿಸಿದ್ದರು. ಕೈಯಲ್ಲಿ ಹಣ ಕೂಡ ಇರಲಿಲ್ಲ. ಹೀಗಾಗಿ ಹಸಿವಿನಿಂದ ಕಂಗಾಲಾಗಿದ್ದರು.
ಈ ಕುಟುಂಬದ ಮಾಹಿತಿ ಪಡೆದಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು, ಇಂದು ಸದ್ದಿಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಆ ಕುಟುಂಬಸ್ಥರಿಗೆ ದಿನ ಬಳಕೆಯ ದಿನಸಿ ವಸ್ತುಗಳನ್ನು ನೀಡಿದ್ದಾರೆ. ಲಘು ಉಪಹಾರಗಳನ್ನು ವಿತರಿಸಿದ್ದಾರೆ. ಅಲ್ಲದೇ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಆ ಕುಟುಂಬಗಳಿಗೆ ಆತ್ಮ ಸ್ಥೈರ್ಯ ತುಂಬುವ ಮೂಲಕ ಅಧಿಕಾರಕ್ಕಿಂತ ಮಾನವಿಯತೆ ದೊಡ್ಡದೆಂದು ತೊರಿಸಿ ಕೊಟ್ಟಿದ್ದಾರೆ.

ಆಹಾರ ಪದಾರ್ಥಗಳನ್ನು ಪಡೆದ ಅಲೆಮಾರಿ ಕುಟುಂಬಸ್ಥರು ಮಾತನಾಡಿ, ಕಳೆದ ಕೆಲವು ದಿನಗಳಿಂದ ವ್ಯಾಪಾರವಿಲ್ಲ. ಹೀಗಾಗಿ ದಿನಸಿ ಪದಾರ್ಥಗಳನ್ನು ಖರೀದಿಸಲು ಕೈಯಲ್ಲಿ ಹಣವಿರಲಿಲ್ಲ. ಆದರೆ, ಇಂದು ದೈವ ಸ್ವರೂಪದಲ್ಲಿ ಆಗಮಿಸಿದ ಬಡಾ ಸಾಹೇಬ್ (ಎಸ್ಪಿ) ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ತಿಂಗಳಿಗಾಗುವಷ್ಟು ದಿನ ಬಳಕೆಯ ಆಹಾರ ವಸ್ತುಗಳನ್ನು ನೀಡಿದ್ದಾರೆ. ಇದರೊಂದಿಗೆ ನಮಗೆ ಧೈರ್ಯ ತುಂಬಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.