ಬೆಂಗಳೂರು: ಶ್ರೀಕೃಷ್ಣದೇವರಾಯರು 64 ವಿದ್ಯೆಗಳಲ್ಲಿ ಪಾರಂಗತರಾಗಿದ್ದ ಹಿನ್ನೆಲೆಯಲ್ಲಿ, ಅವರ ಸಮಾಧಿಯನ್ನು 64 ಕಂಬಗಳಿಂದ ಕೂಡಿದ ವಿಶಿಷ್ಟ ಮಂಟಪದಲ್ಲಿ ನಿರ್ಮಿಸಲಾಗಿದೆ. ಈ ಪವಿತ್ರ ಸ್ಥಳದಲ್ಲಿ ಕೆಲವರು ಮೇಕೆಯನ್ನು ಕಂಬಕ್ಕೆ ಕಟ್ಟಿ ಮಾಂಸ ಸ್ವಚ್ಛಗೊಳಿಸಿರುವ ಕೃತ್ಯವು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಹೊಂದಿರುವ ಸ್ಥಳಕ್ಕೆ ಅಗೌರವ ತಂದಿದೆ.
ಇನ್ನೂ ಈ ವಿಚಾರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರರಾಗಿದ್ದ ವಿಜಯನಗರದ ಶ್ರೀ ಕೃಷ್ಣದೇವರಾಯರ ಸಮಾಧಿಯ ದುಸ್ಥಿತಿ ಇದು. ಈ ಜಾಗವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಕೆಲ ಸ್ಥಳೀಯರು ಪರಿವರ್ತಿಸಿರುವುದು ಕನ್ನಡ ನಾಡಿನ ಹೆಮ್ಮೆಯ ಅರಸರಾದ ಅಸಾಮಾನ್ಯ ಆಡಳಿತಗಾರ, ಅಪ್ರತಿಮ ದಂಡನಾಯಕ ಶ್ರೀ ಕೃಷ್ಣದೇವರಾಯರಿಗೆ ಮಾಡಿದ ಅವಮಾನ” ಎಂದಿದ್ದಾರೆ.
“ಹಿಂದೂ ದೇವಾಲಯಗಳನ್ನು ಕೆಡವಿ, ದೇಶದ ಸಂಪತ್ತನ್ನು ದೋಚಿ, ಸಾವಿರಾರು ಹಿಂದೂಗಳನ್ನು ಅಮಾನವೀಯಗಿ ಕೊಂದ ಔರಂಗಜೇಬನ ಸಮಾಧಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ [ASI] ತೆರಿಗೆದಾರರ ಹಣದಿಂದ ಸಂರಕ್ಷಣೆ ಮಾಡುತ್ತಿದೆ; ಆದರೆ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ,ಸಾಹಿತ್ಯ ರಂಗಗಳ ಪೋಷಕ ಶ್ರೀ ಕೃಷ್ಣದೇವರಾಯರ ಸಮಾಧಿಗೆ ಏಕೆ ಈ ರೀತಿಯಾದ ದಿವ್ಯ ನಿರ್ಲಕ್ಷ್ಯ?” ಎಂದು ಪ್ರಶ್ನಿಸಿದ್ದಾರೆ.