ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಶಿಕ್ಷೆ ನೀಡಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದಿರುವ ಗುಂಡಿನ ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ತಾಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ರಮೇಶ ಹಂಗನಕಟ್ಟಿ ಮಾತನಾಡಿ, ರಿಕ್ಕಿ ರೈ ಮೇಲೆ ಮಧ್ಯರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ಬಿಡದಿಯ ಮುತ್ತಪ್ಪ ರೈ ಅವರ ನಿವಾಸದ ಮುಂದೆಯೇ ಜರುಗಿದೆ. ರಿಕ್ಕಿ ರೈ ವಿಶೇಷವಾಗಿ ತಾವೇ ಕಾರನ್ನು ಚಲಾಯಿಸುತ್ತಿರುವುದನ್ನು ಅರಿತಿದ್ದ ದುಷ್ಕರ್ಮಿಗಳು ಡ್ರೈವಿಂಗ್ ಸೀಟನ್ನೇ ಗುರಿಯಾಗಿಸಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದರು. ಆದರೆ ಅವರು ಮುಂದೆ ಬಾಗಿದ ಪರಿಣಾಮ ಗುಂಡೇಟಿನಿಂದ ಪಾರಾಗಿದ್ದಾರೆ. ಆದರೆ ಪಕ್ಕದ ಸೀಟಿನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಭಯ ಆವರಿಸಿದೆ. ಕಾರಣ ಗುಂಡಿನ ದಾಳಿ ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಹೇಳಿದರು.

ಸಂಘಟನೆಯ ಗೌರವಾಧ್ಯಕ್ಷ ಇಸಾಕ್‌ಭಾಷಾ ಹರಪನಹಳ್ಳಿ ಮಾತನಾಡಿ, ರಿಕ್ಕಿ ರೈ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಖಂಡನೀಯ. ಸರ್ಕಾರ ಅವರಿಗೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ ದಾಳಿ ಮಾಡಿದವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಮೇಲ್ಮುರಿ, ಇರ್ಫಾನ್ ಹರಪನಹಳ್ಳಿ, ಬಸವರಾಜ ಮೂಕಿ, ಪರಶುರಾಮ ಕಿಳ್ಳೆಕ್ಯಾತರ, ಮಹಮ್ಮದ್‌ಯುಸೂಪ್ ಕೊರಗೇರಿ, ಮಾಳಪ್ಪ ಹರಿಜನ, ಸೋಮಣ್ಣ ಮೇಲ್ಮುರಿ ಮತ್ತಿತರರು ಇದ್ದರು. ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು.


Spread the love

LEAVE A REPLY

Please enter your comment!
Please enter your name here