ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಉದ್ಯೋಗ ಖಾತ್ರಿ ಯೋಜನೆಯಡಿ 2025-26ನೇ ಸಾಲಿನಿಂದ ಪ್ರತಿಯೊಬ್ಬ ಕೂಲಿಕಾರರಿಗೆ ದಿನಕ್ಕೆ 370 ರೂ. ಕೂಲಿ ಸಿಗಲಿದ್ದು, ಅಕುಶಲ ಕೂಲಿಕಾರರು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಾ.ಪಂ ಸಹಾಯಕ ನಿರ್ದೇಶಕ (ಗ್ರಾ.ಉ) ಕುಮಾರ ಪೂಜಾರ ತಿಳಿಸಿದರು.

Advertisement

ತಾಲೂಕಿನ ಬೆಳಹೋಡ ಗ್ರಾಮದಲ್ಲಿ 2025-26ನೇ ಸಾಲಿನಲ್ಲಿ ನರೇಗಾ ಯೋಜನೆಯ ಸಮುದಾಯ ಬದು ನಿರ್ಮಾಣ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿಗಳ ಹಾಜರಾತಿ ಕಡ್ಡಾಯವಾಗಿ ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಪ್ರತಿದಿನ ಎರಡು ಬಾರಿ ಅಳವಡಿಸಬೇಕು. ಕಳೆದ ವರ್ಷ ಪ್ರತಿ ದಿನಕ್ಕೆ 349 ರೂ. ಕೂಲಿ ಇತ್ತು. ಎಪ್ರಿಲ್ 1ರಿಂದ ಕೂಲಿ ಮೊತ್ತ 370ಕ್ಕೆ ಹೆಚ್ಚಳವಾಗಿದೆ. ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು. ಅಳತೆಯಂತೆ ಕೆಲಸ ಮಾಡಿದರಷ್ಟೆ ಸಂಪೂರ್ಣ ಕೂಲಿ ಮೊತ್ತ ಸಿಗಲಿದೆ ಎಂದರು.

ಗ್ರಾಮೀಣ ಪ್ರದೇಶದ ಬಡ ಅಕುಶಲ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ. ಕಂದಕ ಬದು ನಿರ್ಮಾಣ ಕಾಮಗಾರಿಯಿಂದ ರೈತರ ಜಮೀನಿನಲ್ಲಿ ಸುರಿದ ಮಳೆ ನೀರು ಮತ್ತು ಮಣ್ಣು ಹೊರ ಹೋಗದಂತೆ ತಡೆಯಬಹುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದರು.

ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜೊತೆಯಾಗಿರುವ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸ ನೀಡಲಾಗುತ್ತಿದೆ. ಅರ್ಹ ಕುಟುಂಬಕ್ಕೆ 5 ಲಕ್ಷ ರೂ. ಮಿತಿಯೊಳಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಪುರುಷ- ಮಹಿಳೆ ಎಂಬ ಭೇದವಿರದೆ ಎಲ್ಲರಿಗೂ ಸಮಾನ ಕೂಲಿ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಕಾರ್ಯದರ್ಶಿ ಮಹಾಲಿಂಗಯ್ಯ ಹಿರೇಮಠ, ತಾಂತ್ರಿಕ ಸಹಾಯಕ ಅಲ್ತಾಫ್ ಅಮ್ಮಿನಬಾವಿ, ಬಿಲ್ ಕಲೆಕ್ಟರ್ ಉಮೇಶ ಮುದಕವಿ, ಬಿಎಫ್‌ಟಿ ಮಂಜುನಾಥ ಬಂಡಿವಾಡ, ಜಿಕೆಎಂ ಪೃಥ್ವಿ ಗಟ್ಟೇನ್ನವರ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.


Spread the love

LEAVE A REPLY

Please enter your comment!
Please enter your name here