ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಎಪ್ರಿಲ್ 16ರಂದು ಭಾರತೀಯ ವಕೀಲರ ಪರಿಷತ್ ಸಹ ಅಧ್ಯಕ್ಷ ಸದಾಶಿವರೆಡ್ಡಿ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿ ಭೀಕರವಾಗಿ ಹಲ್ಲೆ ಮಾಡಿರುವದನ್ನು ಖಂಡಿಸಿ ತಾಲೂಕಾ ವಕೀಲರ ಸಂಘದವರು ತೋಳಿಗೆ ಕೆಂಪು ಪಟ್ಟಿ ಕಟ್ಟಿಕೊಂಡು ಅಧ್ಯಕ್ಷ ಬಿ.ವಿ. ನೇಕಾರ ಅವರ ನೇತೃತ್ವದಲ್ಲಿ ಸಭೆ ಸೇರಿ ಹಲ್ಲೆಯನ್ನು ಖಂಡಿಸುವ ನಿರ್ಣಯ ಕೈಗೊಂಡರು.
ಸಭೆಯಲ್ಲಿ ಅನೇಕ ಹಿರಿಯ, ಕಿರಿಯ ವಕೀಲರು ಹಲ್ಲೆಯನ್ನು ಖಂಡಿಸಿ ಮಾತನಾಡಿ, ಇಂತಹ ಅನೇಕ ದುಷ್ಕೃತ್ಯಗಳು ನಡೆಯುತ್ತಿದ್ದು, ವಕೀಲರಿಗೆ ಭದ್ರತೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಸದಾಶಿವರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು ಮತ್ತು ಅವರಿಗೆ ಉಗ್ರ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ನಂತರ ವಕೀಲರ ಸಂಘದ ಸರ್ವ ಸದಸ್ಯರು ಅಧ್ಯಕ್ಷ ಬಿ.ವಿ. ನೇಕಾರ ಅವರ ಅಧ್ಯಕ್ಷತೆಯಲ್ಲಿ ತಹಸೀಲ್ದಾರ ಕಚೇರಿಗೆ ತೆರಳಿ ಕರ್ನಾಟಕ ರಾಜ್ಯ ವಕೀಲ ಪರಿಷತ್ ಬೆಂಗಳೂರು ಇವರ ಆದೇಶದ ಮೇರೆಗೆ ಎಲ್ಲ ಸದಸ್ಯರು ತೋಳಿಗೆ ಕೆಂಪು ಬಟ್ಟೆ ಕಟ್ಟಿಕೊಂಡು ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು. ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು.
ಈ ವೇಳೆ ತಾಲೂಕಾ ವಕೀಲರ ಸಂಘದ ಕಾರ್ಯದರ್ಶಿ ವಿ.ಎಸ್. ಪಶುಪತಿಹಾಳ, ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ, ಹಿರಿಯ ವಕೀಲರಾದ ವಿ.ಎಲ್. ಪೂಜಾರ, ಬಿ.ಎಸ್. ಘೋಂಗಡಿ, ಪಿ.ಎಂ. ನಾವ್ಹಿ, ಬಿ.ಎಸ್. ಪಾಟೀಲ, ಬಿ.ಬಿ. ಭುವನಗೌಡ್ರ, ಎಂ.ಎನ್. ಬಾಡಗಿ, ಎಸ್.ಡಿ. ಕಮತದ, ಎನ್.ಐ. ಬೆಲ್ಲದ, ಆಯ್.ಜಿ. ಹುಲಬಜಾರ, ಜೆ.ಡಿ. ದೊಡ್ಡಮನಿ, ಎಂ.ಎಂ. ಹಾರೋಗೇರಿ, ಉಮಾ ಬಳ್ಳಾರಿ, ನಂದಾ ಅಮಾಸಿ, ಎಸ್.ಎಚ್. ಮುಳಗುಂದ, ಎನ್.ಐ. ಸೊರಟೂರ, ಬಿ.ವಿ. ಪಾಟೀಲ, ಎಸ್.ಸಿ. ನರಸಮ್ಮನವರ, ಎಸ್.ಎಸ್. ಶೆಟ್ಟರ, ಎಸ್.ಆರ್. ನೇರ್ತಿ ಮುಂತಾದವರಿದ್ದರು.