ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಿಗಾಗಿ ದುಡಿದು, ಮಕ್ಕಳಿಗಾಗಿಯೇ ತಮ್ಮ ಇಡೀ ಜೀವನವನ್ನು ಸವೆಸಿದ ಹಿರಿಯರನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯ ವಹಿಸುವುದು ದುರ್ದೈವದ ಸಂಗತಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾಯದರ್ಶಿ, ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡ್ರ ನುಡಿದರು.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗದಗ, ಶ್ರೀ ಸಿದ್ಧೇಶ್ವರ ವಿದ್ಯಾಪೀಠ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಎಸ್.ಪಿ ಕಚೇರಿ ಗದಗ ಹಾಗೂ ಜೀವನ ಜ್ಯೋತಿ ಶಿವರತ್ನ ವೃದ್ಧಾಶ್ರಮ ಬೆಟಗೇರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರಿಕರಿಗಾಗಿ ಕಾನೂನು ಸಾಕ್ಷರತಾ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವ ತಂದೆ-ತಾಯಿಯೂ ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ, ದ್ರೋಹ ಮಾಡುವುದಿಲ್ಲ. ಅಂತಹ ತಂದೆ-ತಾಯಂದಿರನ್ನು ಮಕ್ಕಳು ವಿವಿಧ ಕಾರಣಗಳಿಂದ ಮನೆಯಿಂದ ಹೊರಹಾಕುವುದು, ಹಗೆ ಸಾಧಿಸುವ ಕೆಲಸ ಮಾಡಬಾರದು. ಹಿರಿಯರಿಗಾಗಿ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿವೆ. ಹಾಗೆಯೇ ಅವರ ರಕ್ಷಣೆಗೆ ಕಾನೂನುಗಳು ಸಹ ಇವೆ ಎಂದು ತಿಳಿಸಿದರಲ್ಲದೆ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಹಿರಿಯ ನಾಗರಿಕರಿಗೆ ಕಾನೂನು ಸೇವೆಗಳ) ಯೋಜನೆ 2016ರ ಕುರಿತು ಹಾಗೂ ಹಿರಿಯ ನಾಗರಿಕರ ಕಾಯ್ದೆ 2007ರ ಕುರಿತು ಮಾಹಿತಿ ನೀಡಿದರು.
ಕಾಯಕ್ರಮದ ಅಧ್ಯಕ್ಷತೆಯನ್ನು ಜೀವನಜ್ಯೋತಿ ಶಿವರತ್ನ ವೃದ್ಧಾಶ್ರಮದ ನಿರ್ದೇಶಕರು ಹಾಗೂ ವಕೀಲರಾದ ಮಂಜುನಾಥ ಶಿವಣ್ಣ ಮುಳಗುಂದ ವಹಿಸಿದ್ದರು. ಕಾರ್ಯಕ್ರಮವನ್ನು ಹಿರಿಯ ನಾಗರಿಕರ ಸಹಾಯವಾಣಿಯ ಆಪ್ತ ಸಮಾಲೋಚಕರಾದ ಸವಿತಾ ನಿರೂಪಿಸಿದರು. ಜೀವನಜ್ಯೋತಿ ವೃದ್ಧಾಶ್ರಮದ ವಾರ್ಡನ್ ಮಂಜುಳಾ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಹಾಂತೇಶ ಕೆ ಮಾತನಾಡಿ, ಹಿರಿಯ ನಾಗರಿಕರು ಕಾನೂನು ತೊಡಕಿನಿಂದ ಹೊರಬರಬೇಕು. ಅವರಿಗೆ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಈ ಕಾಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.