ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮೀಪದ ಸುಕ್ಷೇತ್ರ ಕಣವಿ ಗ್ರಾಮದಲ್ಲಿ ಅಲ್ಲಮಪ್ರಭುದೇವರ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ, ಅಲ್ಲಮಪ್ರಭು ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಕಳಸಾರೋಹಣ ಮಹೋತ್ಸವ ಎಪ್ರಿಲ್ 24ರಿಂದ 30ರವರೆಗೆ ಜರುಗುವುದು ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಬಂದಕ್ಕನವರ ತಿಳಿಸಿದರು.
ಕಾರ್ಯಕ್ರಮದ ಕುರಿತು ಶ್ರೀಮಠದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎ.24ರಂದು ಸಂಜೆ 7 ಗಂಟೆಗೆ ಅಲ್ಲಮಪ್ರಭು ದೇವಸ್ಥಾನದ ಮಹಾದ್ವಾರ ಉದ್ಘಾಟನೆ ಹಾಗೂ ಆಧ್ಯಾತ್ಮಿಕ ಪ್ರವಚನದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ವಹಿಸುವರು. ಅತಿಥಿಗಳಾಗಿ ಜಿ.ಎಸ್. ಗಡ್ಡದ್ದೇವರಮಠ, ಮಲ್ಲಯ್ಯ ಹಿರೇಮಠ, ಫಕೀರಯ್ಯ ಹಿರೇಮಠ, ಹಾಲಮ್ಮ ಕುರಿ, ರೇಣವ್ವ ತಳವಾರ ಭಾಗವಹಿಸುವರು. ಕೆ.ಎ. ಬಳಿಗಾರ ಅವರಿಂದ ಉಪನ್ಯಾಸ, ನೀಲಪ್ಪ ಕಂತಿ ಹಾಗೂ ಗುರುನಾಥ ಕಮ್ಮಾರ ಅವರಿಂದ ಸಂಗೀತ, ಐಶ್ವರ್ಯ ಹಾಗೂ ಶ್ರೀಕಾಂತ ಹುಲಿ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಲಿಂ. ಬಸವರಜ ಹಿಡ್ಕಿಮಠ ಕುಟುಂಬಸ್ಥರಿಗೆ ಸನ್ಮಾನ ಜರುಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಪರಶುರಾಮಪ್ಪ ಕೋಳಿವಾಡ, ಶರಣಬಸನಗೌಡ ಪಾಟೀಲ, ಪ್ರಕಾಶ ಕುರ್ತಕೋಟಿ, ಚಂದ್ರಶೇಖರಯ್ಯ ಹಿರೇಮಠ, ಪರಪ್ಪ ಗಾಜಿ, ವೀರಪ್ಪ ಮಣ್ಣಪ್ಪನವರ, ಬಸಪ್ಪ ಬಬಲಿ, ಪರಪ್ಪ ಕೋಳಿವಾಡ, ಮಹಾಂತಗೌಡ ದೊಡ್ಡಗೌಡ್ರ, ಚನ್ನಪ್ಪ ಬಳಿಗೇರ ಮತ್ತಿತರರು ಇದ್ದರು.
ಎ.24ರಿಂದ 28ರವರೆಗೆ ಸಂಜೆ ವಿವಿಧ ಮಠಾದೀಶರ ನೇತೃತ್ವದಲ್ಲಿ ಪ್ರವಚನ ಕಾರ್ಯಕ್ರಮ ಜರುಗುವುದು. ಎ.28ರಂದು ಅಲ್ಲಮ ಪ್ರಭುದೇವರ ಮೂರ್ತಿ ಮೆರವಣಿಗೆ, ಕುಂಭಮೇಳ ಜರುಗುವುದು. ಎ. 29ರಂದು ವೈದಿಕ ಕಾರ್ಯಕ್ರಮ, ಎ.30ರಂದು ಬೆಳಿಗ್ಗೆ 6 ಗಂಟೆಗೆ ಅಲ್ಲಮಪ್ರಭುದೇವರ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಸಂಜೆ 6 ಗಂಟೆಗೆ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು, ಸಾನ್ನಿಧ್ಯವನ್ನು ಹೊಸಳ್ಳಿ ಬೂದೀಶ್ವರ ಮಠದ ಬೂದೀಶ್ವರ ಶ್ರೀಗಳು ವಹಿಸುವರು. ಉದ್ಘಾಟನೆಯನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಅತಿಥಿಗಳಾಗಿ ಬಸವರಾಜ ಬೊಮ್ಮಾಯಿ, ಎಸ್.ವ್ಹಿ. ಸಂಕನೂರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು ಎಂದು ಬಸವರಾಜ ಬಂದಕ್ಕನವರ ತಿಳಿಸಿದರು.