ಬೆಂಗಳೂರು:- ಜಮ್ಮು ಮತ್ತು ಕಾಶ್ಮಿರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಪ್ರವಾಸಿಗರು ಸಾವಿಗೀಡಾಗಿದ್ದರು. ಇದೇ ವೇಳೆ ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ಬೆಂಗಳೂರು ತಲುಪಿದೆ.
ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಪಾರ್ಥಿವ ಶರೀರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೆಹಲಿಯಿಂದ ಬೆಂಗಳೂರು ಏರ್ಪೋರ್ಟ್ ತಲುಪಿದೆ. ವಿಮಾನ ನಿಲ್ದಾಣದಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಆ್ಯಂಬುಲೆನ್ಸ್ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಮಂಜುನಾಥ್ ಮೃತದೇಹ ಶಿವಮೊಗ್ಗದತ್ತ ಸಾಗಿದೆ. ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಬೆಂಗಳೂರು, ತುಮಕೂರು, ಚಿತ್ರದುರ್ಗ, ಚನ್ನಗಿರಿ ಮೂಲಕ ಶಿವಮೊಗ್ಗಕ್ಕೆ ಮಂಜುನಾಥ್ ಮೃತದೇಹ ತಲುಪಲಿದೆ. ವಿಜಯನಗರ ಗುತ್ಯಪ್ಪ ಕಾಲೋನಿಯಲ್ಲಿರುವ ಮಂಜುನಾಥ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿಗೆ ಮುಂದಾಗಿದ್ದಾರೆ. ತುಂಗಾ ನದಿ ತಟದಲ್ಲಿರುವ ರೋಟರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಮಂಜುನಾಥ್ ಅಂತ್ಯಕ್ರಿಯೆ ನೆರವೇರಲಿದೆ.
ಇತ್ತ ಹಾವೇರಿ ಮೂಲದ ಭರತ್ ಭೂಷಣ್ ಮೃತದೇಹ ಈಗಾಗಲೇ ಬೆಂಗಳೂರಿನಲ್ಲಿರುವ ಮತ್ತಿಕೆರೆ ನಿವಾಸ ತಲುಪಿದೆ. ಮನೆ ಬಳಿ ಬ್ಯಾರಿಕೇಡ್ ಹಾಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಚಿವರು, ಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.