ಮಂಗಳವಾರ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಸ್ಟಾರ್ ಕ್ರಿಕೆಟಿಗರು, ಸಿನಿಮಾ ನಟ- ನಟಿಯರು, ರಾಜಕೀಯ ಮುಖಂಡರು ಸೇರಿ ಇಡೀ ವಿಶ್ವವೇ ಖಂಡಿಸಿದೆ.
ಅದರಂತೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರು ಕೂಡ ಪಹಲ್ಗಾಮ್ ದಾಳಿ ಖಂಡಿಸಿ, ಮೃತಪಟ್ಟವರಿಗೆ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಈ ಪೋಸ್ಟ್ ಬೆನ್ನಲ್ಲೇ ಇದೀಗ ಗಂಭೀರ್‌ಗೆ ಐಸಿಸ್ ಕಾಶ್ಮೀರ ಖಾತೆಯಿಂದ ಜೀವ ಬೆದರಿಕೆಯೊಡ್ಡಲಾಗಿದೆ.
ಈ ಬಗ್ಗೆ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ಗಂಭೀರ್ ದೂರು ನೀಡಿದ್ದಾರೆ. ಗೌತಮ್ ಗಂಭೀರ್ ಅವರು ಬುಧವಾರ ದೆಹಲಿ ಪೊಲೀಸರನ್ನು ಸಂಪರ್ಕಿಸಿ, ಎಫ್‌ಐಆರ್ ದಾಖಲಿಸಿದ್ದಾರೆ. ಹಾಗೆಯೇ ತಮ್ಮ ಕುಟುಂಬದ ಭದ್ರತೆಯನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.
ಏಪ್ರಿಲ್ 22 ರಂದು ಗಂಭೀರ್‌ಗೆ ಎರಡು ಬೆದರಿಕೆ ಇಮೇಲ್‌ಗಳು ಬಂದಿದ್ದವು. ಒಂದು ಇಮೇಲ್ ಮಧ್ಯಾಹ್ನ ಮತ್ತು ಇನ್ನೊಂದು ಸಂಜೆ ಬಂದಿತ್ತು. ಎರಡೂ ಸಂದೇಶಗಳಲ್ಲೂ ಐ ಕಿಲ್ಲ್ ಯು ಎಂದು ಬರೆಯಲಾಗಿತ್ತು. ಈ ಬೆದರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗೌತಮ್ ಗಂಭೀರ್ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.