ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾಶ್ಮೀರದ ಪಹಲ್ಗಾಮ್‌ದಲ್ಲಿನ ಉಗ್ರರ ಅಟ್ಟಹಾಸ ಖಂಡಿಸಿ ಗುರುವಾರ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬೈಸರನ್ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರು ಕೋಮುವಾದಿ ಮನಸ್ಥಿತಿಯಿಂದ ಮುಗ್ಧ ನಾಗರಿಕರ ಮೇಲೆ ನಡೆಸಿದ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಉಗ್ರರು ಅಮಾಯಕರ ಮೇಲೆ ನಡೆಸಿದ ಈ ಕೃತ್ಯ ಅಕ್ಷಮ್ಯವಾಗಿದೆ. ಎಲ್ಲಾ ಧರ್ಮಗಳ ಸಾರ ‘ಪ್ರೀತಿ’ ಮತ್ತು ‘ಅಹಿಂಸೆ’. ಪ್ರೀತಿಯಿಂದ ಸಾಧಿಸಲಾಗದ್ದನ್ನು ಹಿಂಸೆ-ದ್ವೇಷದಿಂದ ಸಾಧಿಸಲಾಗದು. ಕಾಶ್ಮೀರದ ಭಯೋತ್ಪಾದನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮುಸ್ಲಿಂ ಸಮಾಜದಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದರು.
ದೇಶದ ಏಕತೆ ಹಾಗೂ ಸಮಗ್ರತೆಗೆ ಎಲ್ಲ ಧರ್ಮದವರು ಒಂದಾಗಬೇಕು. ಭಾರತ ದೇಶ ಶಾಂತಿ ಪ್ರಿಯ ದೇಶ. ನಾವೆಲ್ಲರೂ ಸಹಬಾಳ್ವೆ-ಸಾಮರಸ್ಯದಿಂದ ಬಾಳುತ್ತಿದ್ದೇವೆ. ಸರ್ಕಾರಗಳು ಉಗ್ರರ ಅಟ್ಟಹಾಸ ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡು ಪ್ರವಾಸಿ ತಾಣಗಳನ್ನು, ಸಾರ್ವಜನಿಕರು ರಕ್ಷಿಸಲು ಸರ್ವಧರ್ಮೀಯರನ್ನು ವಿನಂತಿ ಮಾಡಿದರು.
ಈ ವೇಳೆ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ ಗದಗ, ದೂದಪೀರಾಂ ದರ್ಗಾ ಕಮೀಟಿ ಅಧ್ಯಕ್ಷ ಸುಲೆಮಾನಸಾಬ ಕಣಿಕೆ, ಪುರಸಭೆ ಉಪಾಧ್ಯಕ್ಷ ಫಿರ್ದೋಸ್ ಆಡೂರ, ಎಸ್.ಕೆ. ಹವಾಲ್ದಾರ, ಮುಸ್ತಾಕಹ್ಮದ ಶಿರಹಟ್ಟಿ, ಇಸ್ಮಾಯಿಲ್ ಆಡೂರ, ಕಲಂದರ ಸೂರಣಗಿ, ದಾದಾಪೀರ ತಂಬಾಕದ, ಭಾಷಾ ಶಿರಹಟ್ಟಿ ಸೇರಿ ಮುಸ್ಲಿಂ ಸಮುದಾಯದ ಮುಖಂಡರು, ಯುವರಕು ಇದ್ದರು. ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿದರು.