ವಿಜಯಸಾಕ್ಷಿ ಸುದ್ದಿ, ರೋಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ಆರೋಗ್ಯ ಕಾಳಜಿಯನ್ನು ಒದಗಿಸುವ ಉದ್ದೇಶದಿಂದ ಜಕ್ಕಲಿ ಗ್ರಾಮದ ಸಾಮೂಹಿಕ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಅಭಿಯಾನದಡಿ ಗ್ರಾಮ ಪಂಚಾಯತ ಜಕ್ಕಲಿ, ತಾಲೂಕು ಪಂಚಾಯತ ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ, ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಅಮೂಲ್ಯ. ಜಗತ್ತಿನಲ್ಲಿ ಹಣ ಕೊಟ್ಟರೆ ಏನಾದರೂ ಸಿಗುತ್ತದೆ, ಆದರೆ ಆರೋಗ್ಯ ಸಿಗುವದಿಲ್ಲ. ಈ ಶಿಬಿರವು ಕೂಲಿಕಾರರ ಆರೋಗ್ಯದ ದೃಷ್ಟಿಯನ್ನು ಇಟ್ಟುಕೊಂಡು ಮಾಡಲಾಗಿದೆ. ಇಂತಹ ಶಿಬಿರಗಳು ಗ್ರಾಮೀಣ ಜನರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಂದಿನ ದಿನಗಳಲ್ಲಿಯೂ ಇಂತಹ ಆರೋಗ್ಯ ಶಿಬಿರಗಳನ್ನು ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಕೆಲಸದ ಸ್ಥಳಗಳಲ್ಲಿ ಆಯೋಜಿಸುವ ಯೋಜನೆಯನ್ನು ಹೊಂದಲಾಗಿದೆ ಎಂದರು.
ಶಿಬಿರದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಗಂಗಮ್ಮ, ಉಪಾಧ್ಯಕ್ಷರಾದ ಯಲ್ಲವ್ವ ಮಾದರ, ಸರ್ವ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳಾದ ಸಂತೋಷ ರಾಠೋಡ, ಸಂತೋಷ ಬಳಿಗಾರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾ.ಪಂ ಪಿಡಿಓ ಶಿವಯೋಗಿ ರಿತ್ತಿ ಸೇರಿದಂತೆ ತಾ.ಪಂ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ರಕ್ತಹೀನತೆ, ಕಣ್ಣಿನ ತಪಾಸಣೆ, ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ವಿಶೇಷವಾಗಿ ಗರ್ಭಿಣಿಯರ ಆರೋಗ್ಯ ತಪಾಸಣೆ ಮತ್ತು ಸಲಹೆಯನ್ನು ಒದಗಿಸಲಾಯಿತು. ತಪಾಸಣೆಯ ನಂತರ, ಅಗತ್ಯವಿರುವ ರೋಗಿಗಳಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು ಹಾಗೂ ಮುಂದಿನ ಚಿಕಿತ್ಸೆಗೆ ಸೂಕ್ತ ಸಲಹೆ ನೀಡಲಾಯಿತು.