ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಿರ್ದಿಷ್ಟವಾಗಿ ಹಿಂದೂ ಪ್ರವಾಸಿಗರ ಮೇಲೆ ರಕ್ತಪಿಪಾಸು ಉಗ್ರರು ನಡೆಸಿದ ದುಷ್ಕೃತ್ಯ ಅತ್ಯಂತ ಖಂಡನೀಯ. ಕೇಂದ್ರ ಸರ್ಕಾರ ಈ ರಾಕ್ಷಸರನ್ನು ಪಾತಾಳದಲ್ಲಿ ಅಡಗಿದ್ದರೂ ಹುಟ್ಟಡಗಿಸದೇ ಬಿಡುವುದಿಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ಬಿಜೆಪಿ ಪಕ್ಷದಿಂದ ಶಿಗ್ಲಿ ನಾಕಾದಲ್ಲಿ ಮೋಂಬತ್ತಿ ಬೆಳಗಿಸುವ ಮೂಲಕ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ 26 ಜನ ಭಾರತೀಯರ ಆತ್ಮಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಹತ್ಯೆ ಮಾಡುವ ಮುನ್ನ ಅವರ ಐಡಿ ಹಾಗೂ ಧರ್ಮವನ್ನು ತಿಳಿದು ಹತ್ಯೆ ಮಾಡಿದ್ದು ಪೈಶಾಚಿಕ ಕೃತ್ಯ. ದೇಶದ ಏಕತೆ ಹಾಗೂ ಅಖಂಡತೆಗೆ ಧಕ್ಕೆಯುಂಟುಮಾಡಲು ಇಂಥಹ ದುಷ್ಕೃತ್ಯ ಎಸಗಲಾಗಿದೆ. ಜಗತ್ತಿನಲ್ಲಿ ಭಾರತದ ಕೀರ್ತಿ ಹೆಚ್ಚಾಗುತ್ತಿದ್ದು, ಎಲ್ಲ ದೇಶಗಳು ಭಾರತದ ಏಳಿಗೆಯನ್ನು ಮುಕ್ತಕಂಠದಿಂದ ಹೊಗಳುತ್ತಿವೆ.ಈ ರಾಕ್ಷಸರಿಗೆ ಇದನ್ನು ಸಹಿಸಲಾಗುತ್ತಿಲ್ಲ.
ಈ ನರಭಕ್ಷಕರ ಹುಟ್ಟಡಗಿಸಲು ದೇಶದ ಪ್ರಧಾನಿ ನರೇಂದ್ರಮೋದಿ, ರಕ್ಷಣಾ ಸಚಿವ ರಾಜನಾಥ್‌ಸಿಂಗ್, ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ನಡೆಸಿ ಉಗ್ರಗಾಮಿಗಳ ಹೆಡೆಮುರಿ ಕಟ್ಟಲು ದಿಟ್ಟ ನಿರ್ಧಾರ ಕೈಗೊಳ್ಳಲಿದ್ದಾರೆ. ದೇಶಪ್ರೇಮಿಗಳಾದ ನಮ್ಮ ಸೇನೆಯೂ ಸನ್ನದ್ಧವಾಗಿದೆ ಎಂದರು.
ಈ ವೇಳೆ ಶಿರಹಟ್ಟಿ ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಮಂಜುಳಾ ಗುಂಜಳ, ಪ್ರ.ಕಾರ್ಯದರ್ಶಿ ಅನಿಲ ಮುಳಗುಂದ, ನಗರ ಅಧ್ಯಕ್ಷ ನವೀನ ಬೆಳ್ಳಟ್ಟಿ, ನೀಲಪ್ಪ ಹತ್ತಿ, ನಿಂಗಪ್ಪ ಬನ್ನಿ, ಮಹಾದೇವಪ್ಪ ಅಣ್ಣಿಗೇರಿ, ದುಂಡೇಶ ಕೋಟಗಿ, ನವೀನ ಹಿರೇಮಠ, ಶಕ್ತಿ ಕತ್ತಿ, ಮಂಜನಗೌಡ ಕೆಂಚನಗೌಡ, ಪ್ರವೀಣ ಬೋಮಲೆ, ವಿಜಯ ಕುಂಬಾರ, ವಿಜಯ ಮೆಕ್ಕಿ, ಆದೇಶ ಸವಣೂರ, ಕಿರಣ ಗಾಣಗೇರ, ಅಮಿತ ಗುಡಗೇರಿ, ಈರಣ್ಣ ಪೂಜಾರ, ಚಂದ್ರು ಹಂಪಣ್ಣವರ ಹರೀಶ ಕಟ್ಟಿಮನಿ, ಗಿರೀಶ ಚೌರಡ್ಡಿ, ಕಿರಣ ಮಹಾಂತಶೆಟ್ಟರ, ಸಂತೋಷ ಜಾವೂರ, ಹನುಮಂತ ರಾಮಗೇರಿ, ಶಾಂತವೀರಯ್ಯ ಮಠಪತಿ, ವಿಶಾಲ ಬಟಗುರ್ಕಿ ಸೇರಿ ಅನೇಕ ಬಿಜೆಪಿ ಕಾರ್ಯಕರ್ತರಿದ್ದರು.


