IPL 2025: ಆರ್ ಸಿಬಿಗೆ ‘ಜೋಶ್’ ತಂದ ಗೆಲುವು: ರೋಚಕ ಪಂದ್ಯದಲ್ಲಿ ರಾಜಸ್ಥಾನ್ ಮಣಿಸಿದ ಬೆಂಗಳೂರು!

0
Spread the love

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿಯು 11 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

Advertisement

2025ರ ಆವೃತ್ತಿಯಲ್ಲಿ ಆರ್ ಸಿಬಿಯು, ತವರಿನ ಹೊರಗೆ ಆಡಿದ ಐದೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳನ್ನು ಸೋತಿದ್ದು, ಚಿಂತೆಗೆ ಕಾರಣವಾಗಿತ್ತು. ಆದರೆ ಕೊನೆಗೂ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಗುರುವಾರ ಆರ್ ಸಿಬಿ ತವರಿನಲ್ಲಿ ಈ ಆವೃತ್ತಿಯ ಮೊದಲ ಗೆಲುವು ದಾಖಲಿಸಿದೆ. ಒಂದು ತಂಡವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ ಸಿಬಿ ಸೋಲುವ ಪಂದ್ಯವನ್ನು ಗೆದ್ದುಕೊಂಡಿದೆ. ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ RCB, ವಿರಾಟ್ ಕೊಹ್ಲಿ(70) ಹಾಗೂ ದೇವದತ್ತ ಪಡಿಕ್ಕಲ್(50) ಅವರ ಬಿರುಸಿನ ಅರ್ಧ ಶತಕಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಬರೋಬ್ಬರಿ 205 ರನ್ ಸೇರಿಸಿತು.

ಗೆಲುವಿಗೆ 206 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ರಾಯಸ್ಥಾನ ರಾಯಲ್ಸ್, ಯಶಸ್ವಿ ಜೈಸ್ವಾಲ್(49) ಹಾಗೂ ಧ್ರುವ್ ಜುರೆಲ್(47) ಅವರ ದಿಟ್ಟ ಹೋರಾಟದ ಹೊರತಾಗಿಯೂ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಆರ್ ಸಿಬಿ 11 ರನ್ ಗಳಿಂದ ಗೆಲುವು ಸಾಧಿಸಿತು. ಇನ್ನೂ ಪಂದ್ಯದ ಭವಿಷ್ಯ 19ನೇ ಓವರ್‌ನಲ್ಲಿ ನಿರ್ಧರಿಸಲ್ಪಟ್ಟಿತು. ಜೋಶ್ ಹ್ಯಾಜಲ್‌ವುಡ್ ಅವರ ಬೊಂಬಾಟ್ ಬೌಲಿಂಗ್ ನಿಂದ ಆರ್ ಸಿಬಿ ಗೆಲುವಿಗೆ ಮುಖ್ಯ ಕಾರಣ ಎಂದರೆ ತಪ್ಪಾಗಲ್ಲ.

ಆಸ್ಟ್ರೇಲಿಯಾದ ಅನುಭವಿ ವೇಗಿ ಮೊದಲು ಜುರೆಲ್ ಮತ್ತು ನಂತರ ಜೋಫ್ರಾ ಆರ್ಚರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಕೇವಲ 1 ರನ್ ನೀಡಿದರು. ಹೀಗಾಗಿ 20 ನೇ ಓವರ್‌ನಲ್ಲಿ ರಾಜಸ್ಥಾನ್ ಗೆಲುವಿಗೆ 17 ರನ್‌ ಬೇಕಾಗಿದ್ದವು. ಈ ವೇಳೆ ದಾಳಿಗಿಳಿದ ಯಶ್ ದಯಾಳ್ ರಾಜಸ್ಥಾನವನ್ನು 194 ಕ್ಕೆ ಸೀಮಿತಗೊಳಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.


Spread the love

LEAVE A REPLY

Please enter your comment!
Please enter your name here