ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಹೆಸರಿನಲ್ಲಿ ನಗರದ ಹೃದಯ ಭಾಗದ ನಗರ ಸಭೆಗೆ ಒಳಪಡುವ ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತ ಹಾಗೂ ತಾತ್ಕಾಲಿಕವಾಗಿ ಮಾರಾಟ ಮಳಿಗೆಯನ್ನು ನಿರ್ಮಾಣ ಮಾಡಿಕೊಂಡು ಅನ್ಯ ರಾಜ್ಯದ ವ್ಯಾಪಾರಿಗಳು ಪ್ರತಿ ದಿನ ಲಕ್ಷಾಂತರ ರೂಪಾಯಿ ವ್ಯಾಪಾರ ಮಾಡುತ್ತ ಸ್ಥಳೀಯ ಯುವಕರ ಉದ್ಯೋಗಗಕ್ಕೆ ಕುತ್ತು ತಂದಿದ್ದಾರೆ ಎಂದು ಉದ್ಯೋಗ ಸೇನಾ ಅಧ್ಯಕ್ಷ ಸತೀಶ ಕುಂಬಾರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಲ್ಲದೆ, ಸಾರ್ವಜನಿಕ ರಸ್ತೆಗಳಲ್ಲಿ ಅನಧಿಕೃತ ಹಾಗೂ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ಮಾರಾಟ ಮಳಿಗೆಯಿಂದ ಸಾರ್ವಜನಿಕರಿಗೆ ಹಾಗೂ ಶ್ರೀಮಠದ ಭಕ್ತರಿಗೆ ಸಂಚಾರಕ್ಕೂ ತೊಂದರೆಯಾಗುತ್ತಿರುವ ಕಾರಣ, ಇಂತಹ ಅನಧಿಕೃತ, ತಾತ್ಕಾಲಿಕ ಮಾರಾಟ ಮಳಿಗೆಯನ್ನು ತೆರವುಗೊಳ್ಳಿಸಿ ಸ್ಥಳೀಯ ಯುವಕರಿಗೆ ಉದ್ಯೋಗಕ್ಕೆ ಅವಕಾಶ ಮಾಡಿಕೋಡಬೇಕು. ಸಂಚಾರ ವ್ಯವಸ್ಥೆಯನ್ನು ಸುಗಮಗೊಳ್ಳಿಸಲು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಈ ಜಾತ್ರಾ ಮಹೋತ್ಸವದ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ಮಳಿಗೆಗಳನ್ನು ಕೂಡಲೇ ತೆರವುಗೊಳಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸದಾನಂದಸಿಂಗ್ ಗುರ್ಲಹೊಸೂರ, ಪರಶುರಾಮ ಆಡಿನ, ಪಂಚಾಕ್ಷರಿ ಸಾಲಿಮಠ, ಸಿದ್ಧು ಹಳ್ಳದ, ಈರಣ್ಣ ವಾಲ್ಮೀಕಿ, ಲಕ್ಷ್ಮಣ ಗೌಡರ, ಅರುಣ ಮರಾಠಿ, ಬಸವರಾಜ ಇಟಗಿ ಮುಂತಾದವರು ಹಾಜರಿದ್ದರು.