ಬೆಂಗಳೂರು: ರಾಜಧಾನಿಯಲ್ಲಿ ಇತ್ತೀಚೆಗೆ ಹುಸಿ ಬಾಂಬ್ ಸಂದೇಶ ಕಳುಹಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ನಗರದ ಮಿಲಿಟರಿ ಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಕಿಡಿಗೇಡಿಗಳು ಹುಸಿ ಬಾಂಬ್ ಸಂದೇಶ ಕಳುಹಿಸಿದ್ದರು. ಇದೀಗ ನಗರದ ಪ್ರತಿಷ್ಠಿತ ಆಚಾರ್ಯ ಕಾಲೇಜಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಅಪರಿಚಿತ ವ್ಯಕ್ತಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಜತೆಗೆ, ಕಾಲೇಜು ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಚಾರ್ಯ ಕಾಲೇಜಿನ ಅಧಿಕೃತ ಇ-ಮೇಲ್ ಪರಿಶೀಲನೆ ವೇಳೆ ಬೆರಿಕೆ ಸಂದೇಶ ಗಮನಕ್ಕೆ ಬಂದಿದೆ.
ಸದ್ಯ ಕಾಲೇಜಿನ ಆಡಳಿತ ಮಂಡಳಿ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ದೌಡಾಯಿಸಿದ್ದು, ಕಾಲೇಜು ಆವರಣದಲ್ಲಿ ಸದ್ಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಎನ್ಸಿಆರ್ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ನಂತರ ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ತನಿಖೆ ಮುಂದುವರಿಸಿದ್ದಾರೆ.


