ಡ್ರಗ್ಸ್ ಪ್ರಕರಣದಲ್ಲಿ ಮಲಯಾಳಂ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಜೈಲು ಸೇರಿ ಬರ್ತಿದ್ದಾರೆ. ಉತ್ತಮ ಸಿನಿಮಾಗಳ ಮೂಲಕ ದೇಶ ವಿದೇಶದಲ್ಲೂ ಸದ್ದು ಮಾಡಿದ್ದ ಮಲಯಾಳಂ ಚಿತ್ರರಂಗ ಇದೀಗ ಡ್ರಗ್ಸ್ ಪ್ರಕರಣದಲ್ಲಿ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಶೈನ್ ಟಾಮ್ ಚಾಕೋ ಅರೆಸ್ಟ್ ಆಗಿ, ಜಾಮೀನು ಪಡೆದು ಹೊರಬಂದಿದ್ದರು. ಈಗ ಮಲಯಾಳಂನ ಫೇಮಸ್ ರ‍್ಯಾಪ್ ಸಿಂಗರ್ ವೇಡನ್ ಅವರನ್ನು ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಬಂಧಿಸಲಾಗಿದೆ.
ರ‍್ಯಾಪರ್ ವೇಡನ್ ಮೇಲೆ ಹಲವು ಆರೋಪಗಳು ಕೇಳಿ ಬಂದಿವೆ. ಅವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ 5 ಗ್ರಾಂ ಗಾಂಜಾ ಹಾಗೂ ಅದನ್ನು ಸೇವಿಸಲು ಬಳಸುವ ಉಪಕರಣಗಳು ಪತ್ತೆ ಆಗಿವೆ. ಅವರ ಜೊತೆ ಇನ್ನೂ 8 ಜನರನ್ನು ಬಂಧಿಸಲಾಯಿತು. ಬಳಿಕ ವೇಡನ್ ಅವರಿಂದ ಹೇಳಿಕೆ ಪಡೆದುಕೊಂಡು, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಯಿತು.
ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ವೇಡನ್ ಅವರ ಮನೆಯಲ್ಲಿ ಚಿರತೆ ಹಲ್ಲು ಪತ್ತೆ ಆಗಿದೆ! ಈ ಹಿನ್ನೆಲೆಯಲ್ಲಿ ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ವೇಡನ್ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಚಿರತೆ ಹಲ್ಲು ವೇಡನ್ ಅವರ ಬಳಿ ಹೇಗೆ ಬಂತು ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವೇಡನ್ ಅವರು ಅರಣ್ಯಾಧಿಕಾರಿಗಳ ದಾರಿ ತಪ್ಪಿಸುತ್ತಿದ್ದಾರೆ. ಮೊದಲಿಗೆ ಇದನ್ನು ಥೈಲೆಂಡ್ನಲ್ಲಿ ಖರೀದಿಸಿದ್ದಾಗಿ ಹೇಳಿದರು. ನಂತರ ಇದು ತಮಗೆ ಅಭಿಮಾನಿಗಳು ಗಿಫ್ಟ್ ನೀಡಿದ್ದು ಎಂದು ಹೇಳಿದರು. ವೇಡನ್ ಮೇಲೆ ಈ ಮೊದಲು ಕೂಡ ಆರೋಪಗಳು ಎದುರಾಗಿದ್ದರಿಂದ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.