ವಿಜಯಸಾಕ್ಷಿ ಸುದ್ದಿ, ಚನ್ನಗಿರಿ: ಜೀವನಾಧಾರಕ್ಕೆ ನೀರು, ಅನ್ನ, ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಸಕಲ ಧರ್ಮಕ್ಕೂ ದಯೆ ಮತ್ತು ಮಾನವೀಯತೆ ಮುಕುಟಪ್ರಾಯವಾಗಿವೆ. ಮಹಾತ್ಮರ ಆಧ್ಯಾತ್ಮ ಚಿಂತನೆಗಳ ಅರಿವು ಜೀವನ ಶ್ರೇಯಸ್ಸಿಗೆ ಮೂಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳ ಗದ್ದುಗೆ ಮಠದ ಉದ್ಘಾಟನೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನಲ್ಲಿ ಆತ್ಮ ಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು. ಸನ್ಮಾರ್ಗದಲ್ಲಿ ನಡೆಯುವ ಛಲ ಬೇಕು. ಸುಖ, ಶಾಂತಿಯ ಬದುಕಿಗೆ ಧರ್ಮ ಮತ್ತು ಸಂಸ್ಕೃತಿಗಳ ಪರಿಪಾಲನೆಯ ಅಗತ್ಯವಿದೆ. ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲು ಇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಜಾಗೃತಗೊಂಡು ಆದರ್ಶ, ಸಂಸ್ಕೃತಿಗಳ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ವಿಚಾರ ಧಾರೆಗಳನ್ನು ಬೋಧಿಸುವ ಮೂಲಕ ಲಿಂ. ಶ್ರೀಮದ್ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳವರು ವೀರಶೈವ ಧರ್ಮ ಸಂಸ್ಕೃತಿಯ ಅರಿವು ಉಂಟು ಮಾಡಿ ಭಕ್ತರ ಬಾಳಿಗೆ ಬೆಳಕು ತೋರಿದವರು ಎಂದರು.
ಸಮಾರAಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜೀವನದ ಪ್ರಗತಿ ಮತ್ತು ಉನ್ನತಿಗೆ ಧರ್ಮ ದಿಕ್ಸೂಚಿಯಾಗಿದೆ. ಸತ್ಯ, ಸಂಸ್ಕೃತಿ, ಆದರ್ಶ ಮೌಲ್ಯಗಳನ್ನು ಈ ನಾಡಿನ ಮಠಗಳು ಉಳಿಸಿ ಬೆಳೆಸಿಕೊಂಡು ಬಂದಿವೆ. ಲಿಂ. ಶ್ರೀ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳವರ ಗದ್ದುಗೆ ಸುಂದರವಾಗಿ ನಿರ್ಮಿಸಿ ಗುರು ಕೃಪೆಗೆ ಪಾತ್ರರಾಗಿರುವುದು ತಮ್ಮೆಲ್ಲರ ಸೌಭಾಗ್ಯವೆಂದರು.
ಹುಣಸಘಟ್ಟ ಹಾಲಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯ ಜೀವನದಲ್ಲಿ ಹಣ-ಆಸ್ತಿ ಸಂಪಾದಿಸಿರಿ. ಆದರೆ ಅತಿಯಾದ ದುರಾಶೆ ಬೇಡ. ದುಡಿಮೆ ಮತ್ತು ಧರ್ಮವನ್ನು ನಂಬಿ ಬಾಳಲ್ಲಿ ಯಶಸ್ವಿ ಜೀವನ ಸೂತ್ರಗಳನ್ನು ಬೋಧಿಸಿ ಹರಸಿದ ಲಿಂ. ಶ್ರೀ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳವರ ಗದ್ದುಗೆ ಕಟ್ಟಡ ನಿರ್ಮಾಣ ಮಾಡಿ ಗುರು ಕಾರುಣ್ಯಕ್ಕೆ ತಾವೆಲ್ಲರೂ ಪಾತ್ರರಾಗಿದ್ದೀರಿ ಎಂದು ಹರುಷ ವ್ಯಕ್ತಪಡಿಸಿದರು.
ಬಿಳಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ನಂದಿಪುರ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು, ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಬೀರೂರು ಬಾಳೆಹೊನ್ನೂರು ಖಾಸಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಚನ್ನಗಿರಿ ವಿರಕ್ತಮಠದ ಡಾ. ಬಸವ ಜಯಚಂದ್ರ ಸ್ವಾಮಿಗಳು, ಹಣ್ಣೆ ಬೃಹನ್ಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು, ಚನ್ನಗಿರಿ ಹಿರೇಮಠದ ಡಾ. ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು, ಕಲಾದಗಿ ಗಂಗಾಧರ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಹಿರೇಮಠ ವಿಠಲಾಪುರ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.
ನೇತೃತ್ವ ವಹಿಸಿದ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನದಿ ಮನುಷ್ಯನ ದಾಹ ಹಿಂಗಿಸುತ್ತದೆ. ವೃಕ್ಷ ನೆರಳು, ಹೂ-ಹಣ್ಣು ಕೊಡುತ್ತದೆ. ಆಚಾರ್ಯರು ಮತ್ತು ಋಷಿಮುನಿಗಳು ಜ್ಞಾನ ಸುಧೆಯ ಮೂಲಕ ಇತರರ ಬಾಳನ್ನು ಬೆಳಗಿಸಿದ್ದಾರೆ. ಲಿಂ. ಶ್ರೀ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳು ವೀರಶೈವ ಚಿಂತನೆಯನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.