ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿಶ್ವಗುರು ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿರುವ ಅಜ್ಞಾನ, ಅಂಧಕಾರ, ಮೂಢನಂಬಿಕೆಗಳನ್ನು ಹೊಡೆದೋಡಿಸಿ ಮನುಕುಲಕ್ಕೆ ದಾರಿದೀಪವಾಗಿದ್ದಾರೆ ಎಂದು ತಹಸೀಲ್ದಾರ ವಾಸುದೇವ ವಿ.ಸ್ವಾಮಿ ಹೇಳಿದರು.
ಅವರು ಬುಧವಾರ ತಹಸೀಲ್ದಾರ ಕಚೇರಿಯಲ್ಲಿ ಬಸವೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಗಜ್ಯೋತಿ ಬಸವಣ್ಣನವರ ಭಾವಚಿತ್ರವಿಟ್ಟು ದೀಪ ಹಚ್ಚಿ, ಹೂವು ಹಾಕಿ ನಮಿಸುವುದರ ಜತೆಗೆ ಅವರ ವಚನ, ತತ್ವ ಸಿದ್ಧಾಂತಗಳನ್ನು ಎಲ್ಲರೂ ಓದಿ ಅರ್ಥೈಸಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಅವರಿಗೆ ನಾವು ಗೌರವ ಕೊಟ್ಟಂತಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಬೆಳಕು ಮೂಡಲು ಬಸವಣ್ಣನವರ ಚಿಂತನೆ, ಸಂದೇಶ, ವಚನಗಳ ಅಧ್ಯಯನ ಅಗತ್ಯ. ಇದರಿಂದ ಜಗತ್ತಿನ ಭವಿಷ್ಯ ಜ್ಞಾನದತ್ತ ಬದಲಾವಣೆ ಆಗಲಿದೆ. ಅದರಿಂದ ರಾಷ್ಟ್ರವು ಶಕ್ತಿಯುತವಾಗಲಿದೆ. ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣರಾದ ಅವರ ಜ್ಞಾನ ಭಂಡಾರದ ಬಗ್ಗೆ ವಿದೇಶಿಗರು ಆಕರ್ಷಿತರಾಗಿದ್ದು, ಭಾರತೀಯರು ಇತ್ತ ಚಿತ್ತ ಹರಿಸಬೇಕಾಗಿದೆ ಎಂದರು.
ಈ ವೇಳೆ ಚಿರಾಯು ಎಸ್.ಹೊತಗಿಮಠ ಹಾಗೂ ಪ್ರಭುಸ್ವಾಮಿ ಎಸ್.ಹೊತಗಿಮಠ ಸಹೋದರರು ಬಸವಣ್ಣನವರ ವೇಷಭೂಷಣದಲ್ಲಿ ಗಮನ ಸೆಳೆದರು.
ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಪ್ರಶಾಂತ ಕಿಮಾಯಿ, ಜೆ.ಎ. ಮನಿಯಾರ, ಅರೋಗ್ಯ ಇಲಾಖೆಯ ಬಿ.ಎಸ್. ಹಿರೇಮಠ, ಕ.ರಾ.ಸ.ನೌ ಸಂಘದ ಅಧ್ಯಕ್ಷ ಗುರುರಾಜ ಹವಳದ, ಕೆ.ಎನ್. ಪಾಟೀಲ, ಡಿ.ಎಸ್. ಕುಲಕರ್ಣಿ, ಸುಬೇದಖಾನ ಪಠಾಣ, ಸುಷ್ಮಾ ಎನ್, ಸವಿತಾ ಕುಲಕರ್ಣಿ ಸೇರಿದಂತೆ ಸಿಬ್ಬಂದಿಗಳಿದ್ದರು.


