ಖ್ಯಾತ ಗಾಯಕ ಸೋನು ನಿಗಂ ವಿವಾದ ಸೃಷ್ಟಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಿಗರ ಬಗ್ಗೆ, ಕನ್ನಡತನದ ಬಗ್ಗೆ ಸೋನು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಇದೀಗ ಇದೀಗ ಸೋನು ನಿಗಂ ವಿರುದ್ಧ ದೂರು ದಾಖಲಾಗಿದೆ. ಸೋನು ನಿಗಂ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡಪರ ಸಂಘಟನೆಗಳು ಸೋನು ನಿಗಂ ವಿರುದ್ಧ ದೂರು ದಾಖಲಿಸಿವೆ. ಕನ್ನಡ ಚಿತ್ರರಂಗ ಸೋನು ನಿಗಂ ಅವರನ್ನು ನಿಷೇಧಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಸದಸ್ಯರು ಸೋನು ನಿಗಂ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕನ್ನಡಿಗರ ಕನ್ನಡ ಪ್ರೇಮವನ್ನು ಭಯೋತ್ಪಾದಕತೆಗೆ ಹೋಲಿಸಿದ ಸೋನು ನಿಗಂ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಲಿದ್ದು, ಸೋನು ನಿಗಂ ವಿರುದ್ಧ ದೂರು ದಾಖಲಿಸಲಿದ್ದಾರೆ.
ಸೋನು ನಿಗಂ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಮಾತನಾಡಿರುವ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ‘ಸೋನು ನಿಗಂ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ. ಸೋನು ನಿಗಮ್ ಕನ್ನಡದಿಂದ ಬ್ಯಾನ್ ಮಾಡಬೇಕು, ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸುತ್ತಾನಾ? ಸೋನು ನಿಗಂ ಈ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವಾದರೆ ಸೋನು ನಿಗಮ್ ಕನ್ನಡ ಹಾಡು ಹಾಡುವಂತಿಲ್ಲ, ಸೋನು ನಿಗಂ ಮೇಲೆ ನಿಷೇಧ ಹೇರಬೇಕು ಎಂದು ಕನ್ನಡ ಚಲನಚಿತ್ರ ಮಂಡಳಿ, ನಿರ್ಮಾಪಕ ಸಂಘಕ್ಕೆ ಆಗ್ರಹಿಸುತ್ತೇನೆ’ ಎಂದಿದ್ದಾರೆ.
ಈ ರೀತಿ ದುರಭಿಮಾನಿ ತೋರಿಸುವ ಸೋನು ನಿಗಮ್ ಗೆ ಹಾಡಲು ಅವಕಾಶ ಕೊಡಬೇಡಿ, ಕನ್ನಡ ಹಾಡು ಹಾಡಿ ಎಂದು ಕೇಳೋದು ತಪ್ಪಾ?, ನೂರಾರು ಕನ್ನಡ ಚಿತ್ರ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ, ಬಾಲಿವುಡ್ ಕೈ ಕೊಟ್ಟಾಗ ಕನ್ನಡಗರು ಕೈಹಿಡಿದು ಗೆಲ್ಲಿಸಿದರು. ನಮ್ಮ ಹಣ, ನಮ್ಮ ಅನ್ನ ತಿಂದು ಕನ್ನಡ ಹಾಡು ಎಂದರೆ ಅದು ಅಪರಾಧವೇ?, ಕನ್ನಡತನವನ್ನು ಭಯೋತ್ಪಾದಕರಿಗೆ ಹೋಲಿಸಿ ಆಮೇಲೆ ಕನ್ನಡದ ಮೇಲೆ ತೋರಿಕೆಯ ಪ್ರೀತಿ ಮಾತಾಡ್ತಿಯಾ? ಕನ್ನಡ ಹಾಡು ಎಂದು ಕೇಳಿದಾಗ ಹಾಡಬೇಕಿತ್ತು ಇಲ್ಲವೇ ತಪ್ಪಗಿರಬೇಕಿತ್ತು, ಅದು ಬಿಟ್ಟು ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ಮಾಡ್ತೀಯಾ?, ಭಯೋತ್ಪದಕರ ರೀತಿ ಮಾಡಿದರೆ ನಾವು ಸುಮ್ಮನಿರಲ್ಲ ಎಸ್ ಪಿ ಬಿ ಅಂಥ ಶ್ರೇಷ್ಠ ಗಾಯಕರು ಕನ್ನಡದ ಬಗ್ಗೆ ಎಂಥ ಗೌರವ ಇಟ್ಟುಕೊಂಡಿದ್ದರು. ಆದರೆ ನಿಗಮ್ ಈ ರೀತಿ ನಡೆದುಕೊಂಡು ಸರಿಯಲ್ಲ, ಕೂಡಲೆ ಕ್ಷಮೆ ಕೇಳಬೇಕು’ ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.