ಇತ್ತೀಚೆಗಷ್ಟೆ ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಕನ್ನಡಿಗರೂ ಸೇರಿದಂತೆ 27 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯನ್ನು ದೇಶ, ವಿದೇಶಗಳು ತೀವ್ರವಾಗಿ ಖಂಡಿಸಿವೆ. ಸಿನಿಮಾ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಖ್ಯಾತ ನಟ ಮಂಚು ವಿಷ್ಣು ಒಂದು ಹೆಜ್ಜೆ ಮುಂದೆ ಹೋಗಿ ಪಹಲ್ಗಾಮ್ ದಾಳಿ ಸಂಸ್ತ್ರರ ಕುಟುಂಬವೊಂದನ್ನು ದತ್ತು ಪಡೆದು ಮಾನವೀಯತೆ ಮೆರೆದಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ ಆಂಧ್ರದ ನೆಲ್ಲೂರು ಜಿಲ್ಲೆಯ ಕುಟುಂಬವೊಂದು ತೀವ್ರ ನಷ್ಟ ಅನುಭವಿಸಿದೆ. ನೆಲ್ಲೂರು ಜಿಲ್ಲೆ ಕಾವೆಲ್ಲಿಯ ಕುಮಾರಿ ಸ್ಟ್ರೀಟ್ನಲ್ಲಿ ವಾಸವಿದ್ದ ಸೋಮಶೆಟ್ಟಿ ಮಧುಸೂಧನ್ ರಾವ್ ಎಂಬುವರು ಕುಟುಂಬದೊಟ್ಟಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಆ ವೇಳೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಧುಸೂಧನ್ ರಾವ್ ನಿಧನ ಹೊಂದಿದ್ದರು.
ಇತ್ತೀಚೆಗಷ್ಟೆ ನಟ ಮಂಚು ವಿಷ್ಣು ಮಧುಸೂದನ್ ರಾವ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಮಾತ್ರವಲ್ಲದೆ ಮಧುಸೂದನ್ ಅವರ ಇಬ್ಬರು ಮಕ್ಕಳನ್ನು ಮಂಚು ವಿಷ್ಣು ದತ್ತು ಪಡೆದಿದ್ದಾರೆ. ಅಂದರೆ ಇಬ್ಬರು ಮಕ್ಕಳ ಶಿಕ್ಷಣದ ಸಂಪೂರ್ಣ ಖರ್ಚನ್ನು ತಾವೇ ವಹಿಸುವುದಾಗಿ ಮಂಚು ವಿಷ್ಣು ಘೋಷಿಸಿದ್ದಾರೆ. ಅಲ್ಲದೆ ಕುಟುಂಬಕ್ಕೆ ಆರ್ಥಿಕ ಸಹಾಯ ಸಹ ಮಾಡಿದ್ದಾರೆ.
ತೆಲುಗು ಕಲಾವಿದರ ಸಂಘದ ಅಧ್ಯಕ್ಷರೂ ಆಗಿರುವ ಮಂಚು ವಿಷ್ಣು ಆಗಾಗ್ಗೆ ತಮ್ಮ ಹೇಳಿಕೆಗಳಿಂದ, ತಮ್ಮ ನಟನೆಯಿಂದಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಇದೀಗ ಮಂಜು ವಿಷ್ಣು ಮಾಡಿರುವ ಕೆಲಸಕ್ಕೆ ಪ್ರತಿಯೊಬ್ಬರು ಬೇಷ್ ಅಂತಿದ್ದಾರೆ.