ಬೆಂಗಳೂರು: ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬರೋಬ್ಬರಿ ಮೂರುವರೆ ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಇದೀಗ ಓಬಳಾಂಪುರ ಅಧಿರು ಸಾಗಾಣಿಕೆ ಪ್ರಕರಣದಲ್ಲಿ ಸಿಲುಕಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಬರೋಬ್ಬರಿ 16 ವರ್ಷಗಳ ಬಳಿಕ ಆಂಧ್ರಪ್ರದೇಶದ ನಾಂಪಲಿ ಸಿಬಿಐ ಕೋರ್ಟ್ ಅವರನ್ನು ದೋಷಿ ಎಂದು ಆದೇಶ ಹೊರಡಿಸಿದೆ. ಇದರಿಂದ ಜನಾರ್ದನ ರೆಡ್ಡಿಗೆ ಮತ್ತೆ ಜೈಲು ಫಿಕ್ಸ್ ಆದಂತಾಗಿದೆ.
3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗಿರುವುದರಿಂದ ಶಾಸಕ ಜನಾರ್ದನ ರೆಡ್ಡಿ ಜೈಲು ಖಚಿತವಾಗಿದೆ. ಇನ್ನು ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಹಾಗೇ ಒಂದು ತಿಂಗಳೊಳಗೆ ರೆಡ್ಡಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಹೈಕೋರ್ಟ್ನಿಂದ ತಡೆ ಸಿಕ್ಕರಷ್ಟೇ ರೆಡ್ಡಿ ಬಚಾವ್ ಆಗಲಿದ್ದಾರೆ.
ಹೀಗಾಗಿ ರೆಡ್ಡಿ ಜಾಮೀನಿಗಾಗಿ ಹೈದರಾಬಾದ್ನ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಹೈಕೋರ್ಟ್ ಜಾಮೀನು ನೀಡುವವರೆಗೆ ಜೈಲಿನಲ್ಲಿರಬೇಕು. ಇನ್ನು ಶಿಕ್ಷೆಗೆ ತಡೆಯಾಜ್ಞೆ ಸಿಗದಿದ್ದರೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯೂ ಇದೆ.
ಏನಿದು ಹಗರಣ?
ಜನಾರ್ಧನ ರೆಡ್ಡಿ ವಿರುದ್ಧ ಅಕ್ರಮ ಅದಿರು ರವಾನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಅವರು ಬರೋಬ್ಬರಿ 29 ಲಕ್ಷ ಟನ್ ಅಧಿರನ್ನು ಕರ್ನಾಟಕದಿಂದ ಆಂಧ್ರ ಪ್ರದೇಶಕ್ಕೆ ರವಾನೆ ಮಾಡಿದ್ದಾರೆ ಎಂದ ದೂರು ಕೇಳಿ ಬಂದ ಹಿನ್ನೆಲೆ 2009 ರಲ್ಲಿ ಅವರ ವಿರುದ್ಧ ತನಿಖೆ ನಡೆಸುವಂತೆ ಅಂದಿನ ಆಂಧ್ರಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು.
ಸದ್ಯ ತನಿಖೆ ನಡೆಸಿದ ಸಿಬಿಐ ಅವರನ್ನು 29 ಲಕ್ಷ ಟನ್ ಅಧಿರನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಸಾಭೀತಾಗಿದೆ. ಮಾತ್ರವಲ್ಲ ಈ ಹಗರಣದಲ್ಲಿ ಅವರು ಬರೋಬ್ಬರಿ 884 ಕೋಟಿ ಆದಾಯ ಗಳಿಸಿದ್ದಾರೆ ಎಂಬುದು ಕೂಡ ಸಾಭೀತಾದ ಹಿನ್ನೆಲೆ ಜನಾರ್ಧನ ರೆಡ್ಡಿ ಸೇರಿ ಇತರ ಐದು ಮಂದಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.