ವಿಜಯಸಾಕ್ಷಿ ಸುದ್ದಿ, ನರಗುಂದ: ಈ ಕಾರ್ಯಕ್ರಮದಿಂದ ನನಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ ತಂದೆ ಹಾಕಿದ ಮಾರ್ಗದಲ್ಲಿಯೇ ಸಾಗುತ್ತಿರುವುದು ನನಗೆ ಸಂತಸ ಮಾತ್ರವಲ್ಲದೆ ಯಶಸ್ಸು ಮತ್ತು ಕೀರ್ತಿಯನ್ನು ಕೊಟ್ಟಿದೆ. ಶಿರೋಳ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ನನ್ನ ಬೆಳವಣಿಗೆಯಲ್ಲಿ ಅಗಾಧ ಪಾತ್ರವನ್ನು ವಹಿಸಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ನಾನು ಸಹಾಯ ಮಾಡಲು ಸದಾ ಸಿದ್ಧ ಎಂದು ಉದ್ಯಮಿ ಲಾಲಸಾಬ ಅರಗಂಜಿ ಹೇಳಿದರು.
ತಾಲೂಕಿನ ಶಿರೋಳದಲ್ಲಿ ಲಾಲಸಾಬ ಅರಗಂಜಿ ಅಭಿಮಾನಿ ಬಳಗ-ಶಿರೋಳ ವತಿಯಿಂದ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಯುವ ಮುಖಂಡ ಮಹೇಶಗೌಡ ಸಿ.ಪಾಟೀಲ ಮಾತನಾಡಿ, ಲಾಲಸಾಬ ಅರಗಂಜಿ ಅಭಿಮಾನಿ ಬಳಗದಿಂದ ಗ್ರಾಮದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳು ನಡೆಯುತ್ತಿದ್ದು, ಕಳೆದ ವರ್ಷ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ಪೆನ್ ವಿತರಣೆ ಹಾಗೂ ಸರ್ಕಾರಿ ಶಾಲೆಗೆ ದೊಡ್ಡ ಐಇಆ ಟಿವಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ಸಾಧನೆಗೈದವರನ್ನು ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಿಟ್ ಪಡೆದವರನ್ನು ಹಾಗೂ ಶ್ರಮಿಕ ವರ್ಗದವರನ್ನು ಗುರುತಿಸಿ ಸನ್ಮಾನಿಸಿರುವುದು ಅವರ ಬಳಗಕ್ಕೆ ಇರುವ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ ಎಂದರು.
ರಸಮಂಜರಿ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಜ್ಯೂ. ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ಮೊಟ್ಟ ಮೊದಲಿಗೆ ಒಬ್ಬ ವ್ಯಾಪಾರಸ್ಥರಿಗೆ ಇರುವ ಅಭಿಮಾನಿ ಬಳಗವನ್ನು ನೋಡುತ್ತಿದ್ದೇನೆ. ಮಧ್ಯರಾತ್ರಿಯಲ್ಲೂ ಹೆಣ್ಣು ಮಕ್ಕಳು, ಮಕ್ಕಳು ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಿದ್ದು ಅವರಿಗೆ ಇರುವ ಪ್ರಾಮಾಣಿಕತೆಯನ್ನು ತೋರಿಸುತ್ತದೆ ಎಂದರು.
ಪ್ರಭಾಕರ ಉಳ್ಳಾಗಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಕೊಣ್ಣೂರ, ಶರಣಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ನಂತರ ರಾಜು ಸುಳ್ಳದ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಿಂಗಣ್ಣ ಗಾಡಿ, ವಿ.ಕೆ. ಮರಿಗುದ್ದಿ, ನಾಗನಗೌಡ ತಿಮ್ಮನಗೌಡ್ರ, ಡಿ.ವೈ. ಕಾಡಪ್ಪನವರ, ಅನಿಲ ಧರಿಯನ್ನವರ, ಬಾಬುಗೌಡ್ರ ತಿಮ್ಮನಗೌಡ್ರ, ಈರಯ್ಯ ಮಠದ, ಬಿ.ಎಸ್. ಸಾಲಿಮಠ, ದ್ಯಾಮಣ್ಣ ತೆಗ್ಗಿ, ಪರಸಪ್ಪ ರಾಥೋಡ್, ಶರಣಪ್ಪ ಕಾಡಪ್ಪನವರ, ಅಕ್ಷಯ ಗಡೆಕಾರ, ಚೇತನ್ ಕಲಾಲ, ಅರುಣ ದಾಸರ, ರಾಜು ಚಳ್ಳಮರದ, ಅಶೋಕ ತಡಹಾಳ, ಗಿರೀಶ ಗಾಣಿಗೇರ, ಸೇರಿದಂತೆ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ಅಭಿನವ ಯಚ್ಚರಮಹಾಸ್ವಾಮಿಗಳು ಮಾತನಾಡಿ, ನಮ್ಮ ಮಠಕ್ಕೂ ಅರಗಂಜಿ ಅವರ ಮನೆತನಕ್ಕೂ ಇತಿಹಾಸದಿಂದಲೂ ಬಾಂಧವ್ಯ ಇದೆ. ಸದಾ ಕ್ರಿಯಾಶೀಲವಾಗಿ ಸಾಮಾಜಿಕ ಚಿಂತನೆ ಮಾಡುವ ಲಾಲಸಾಬ ಅರಗಂಜಿಯವರಿಗೆ ಇನ್ನೂ ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಆಶೀರ್ವಚನ ನೀಡಿದರು.