ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ/ಶಿಗ್ಲಿ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮಗಳ ನಿಮಿತ್ತ ಮಾ. 28ರಿಂದ ಪ್ರವಚನ, ಜನಜಾಗೃತಿಗಾಗಿ ಪಾದಯಾತ್ರೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿವೆ.
ಮಂಗಳವಾರ ಸಂಜೆ ಗ್ರಾಮದಲ್ಲಿ ಬಸವ ಬುತ್ತಿ ಮೆರವಣಿಗೆ ಕಾರ್ಯಕ್ರಮ ಗಮನ ಸೆಳೆಯಿತು. ಗ್ರಾಮದ ಎಲ್ಲ ಮಹಿಳೆಯರು, ಮಕ್ಕಳು ಶಿಗ್ಲಿ ಸೀರೆ-ಕುಪ್ಪಸ ತೊಟ್ಟು ತಲೆಯ ಮೇಲೆ ಭಕ್ತಿಯಿಂದ ಮಾಡಿದ ಬುತ್ತಿಯ ಗಂಟು ಹೊತ್ತು ಗ್ರಾಮದ ಪ್ರಮುಖ ಮಾರ್ಗದ ಮೂಲಕ ದೇವಸ್ಥಾನದಲ್ಲಿ ಜಮಾವಣೆಗೊಂಡರು. ಶ್ರೀಗಳ ಪ್ರವಚನದ ನಂತರ ಎಲ್ಲರೂ ತಂದಿದ್ದ ಬುತ್ತಿಯನ್ನು ಅತ್ಯಂತ ಸಂತೋಷದಿಂದ ಊಟ ಮಾಡಿ ಸಂಭ್ರಮ-ಸಂತಸಪಟ್ಟರು.
ಈ ವೇಳೆ ಮಾತನಾಡಿದ ಶ್ರೀ ಚನ್ನವೀರ ಮಹಾಸ್ವಾಮಿಗಳು, ಮಹಾಮಾನವತಾವಾದಿ, ವಿಶ್ವಗುರು ಬಸವಣ್ಣನವರ ಪರಿಕಲ್ಪನೆಯ ಬಸವ ಬುತ್ತಿ ಅತ್ಯಂತ ಅರ್ಥಪೂರ್ಣವಾಗಿದೆ. ಬಸವಣ್ಣನವರ ಸಮಾನತೆ ಹಾಗೂ ದಾಸೋಹದ ಮಹತ್ವ ಸಾರುವ ಬಸವ ಬುತ್ತಿ ಕಾರ್ಯಕ್ರಮದಿಂದ ಎಲ್ಲ ಜಾತಿ, ಜನಾಂಗದವರಲ್ಲಿ ಪರಸ್ಪರ ಸ್ನೇಹ, ಅನ್ಯೋನ್ಯತೆ, ಭ್ರಾತೃತ್ವ, ಬಾಂಧವ್ಯ, ಸಮಭಾವ ಮೂಡುತ್ತದೆ. ಪರಸ್ಪರ ಹಂಚಿಕೊAಡು ಉಣ್ಣುವುದರಿಂದ ಬಡವ-ಬಲ್ಲಿದೆಂಬ ಬೇಧ ಭಾವ ತೊಲಗಿ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಹಬ್ಬ, ಉತ್ಸವ, ಜಾತ್ರೆ, ಸಮಾರಂಭಗಳ ನೆಪದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಶ್ರೀ ಗುರು ಕೊಟ್ಟೂರೇಶ್ವರ ವಿವಿಧೋದ್ದೇಶಗಳ ಸೇವಾ ಸಮಿತಿ ಅಧ್ಯಕ್ಷ ಮಹಾದೇವಪ್ಪ ಬೆಳವಿಗಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಡಿವೈ ಹುನಗುಂದ, ಅಶೋಕ ಶಿರಹಟ್ಟಿ ರಾಜು ಓಲೇಕಾರ, ರಾಮಣ್ಣ ಲಮಾಣಿ (ಶಿಗ್ಲಿ) ನಾಗಪ್ಪ ತಂಬ್ರಳ್ಳಿ, ನಾಗರಾಜ ಬೆಳವಿಗಿ, ಮಂಜುನಾಥ ಗುಂಡಮಿ, ಶಿವಯೋಗಿ ಹಿರೇಮಠ, ಶಿವಯ್ಯ ಪೂಜಾರ, ಮಂಜುನಾಥ ಬೀಳಗಿ, ರಾಘವೇಂದ್ರ ಅಸುಂಡಿ ಸೇರಿ ಹಿರಿಯರು, ಯುವಕರು ಪಾಲ್ಗೊಂಡಿದ್ದರು.