ವಿಜಯಸಾಕ್ಷಿ ಸುದ್ದಿ, ಗದಗ: ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ರವಿ ಗುಂಜೀಕರರು ನೌಕರರ-ಸಾರ್ವಜನಿಕರ ಅಪಾರ ಪ್ರೀತಿಯನ್ನ ಗಳಿಸಿದ್ದಾರೆ ಎನ್ನುವುದಕ್ಕೆ ಅವರ ನಿವೃತ್ತಿ ಸಮಾರಂಭ ಸಾಕ್ಷಿಯಾಗಿದ್ದು, ಸಮಾಜಮುಖಿ ವ್ಯಕ್ತಿತ್ವವುಳ್ಳ ರವಿ ಗುಂಜೀಕರರ ಸೇವೆ ನಿವೃತ್ತಿ ನಂತರವೂ ಮುಂದುರೆಯಲಿ ಎಂದು ಕಾನೂನು-ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ. ಪಾಟೀಲ ಆಶಿಸಿದರು.
ಅವರು ಮಂಗಳವಾರ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಗುಂಜೀಕರ ಅವರ ವಯೋನಿವೃತ್ತಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡಿದ ರವಿ ಗುಂಜೀಕರ ತಮ್ಮ ಸೇವಾ ಅವಧಿಯಲ್ಲಿ ನೊಂದವರು-ಹಿಂದುಳಿದವರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ. ಗದುಗಿನ ಸರ್ಕಾರಿ ನೌಕರರ ವೃಂದದಲ್ಲಿ ಸ್ಥಿರತೆ ಇದ್ದು, ಉಳಿದ ಜಿಲ್ಲೆಗಳ ನೌಕರ ವರ್ಗಕ್ಕಿಂತ ಭಿನ್ನವಾಗಿ ಇಲ್ಲಿನ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ನೌಕರರ ಸಂಘವನ್ನು ಹಲವು ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಿದ ಶ್ರೇಯಸ್ಸು ಗುಂಜೀಕರರಿಗೆ ಸಲ್ಲುತ್ತದೆ. ಸರ್ಕಾರಿ ಸೇವೆಯಿಂದ ನಿವೃತ್ತಿಯಾದರೆ ಸಾಮಾಜಿಕ ಜವಾಬ್ದಾರಿಗಳಿಂದ ನುಣುಚಿಕೊಳ್ಳಬೇಕಿಲ್ಲ ಎನ್ನುವುದಕ್ಕೆ ಗುಂಜೀಕರರು ನಿದರ್ಶನವಾಗಿದ್ದಾರೆ ಎಂದರು.
ರವಿ ಗುಂಜೀಕರ ಅವರ ಜೀವನ-ಸಾಧನೆಗಳುಳ್ಳ ಅಭಿನಂದನಾ ಗ್ರಂಥ `ನೌಕರರ ನಾವಿಕ’ ಬಿಡುಗಡೆಗೊಳಿಸಿದ ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ನನ್ನೊಡನೆ 13 ವರ್ಷಗಳಿಂದ ಸರ್ಕಾರಿ ನೌಕರರ ಸಂಘದ ಹಿತಕ್ಕಾಗಿ ಶ್ರಮಿಸುತ್ತಿರುವ ರವಿ ಗುಂಜೀಕರ ಸಂಘಟನೆ ಹಾಗೂ ಸರ್ಕಾರಿ ಸೇವೆ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಚತುರರು. ಮೂರು ಬಾರಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಗುಂಜೀಕರ ಅವರು ಆ ಸ್ಥಾನದ ಗೌರವ ಹೆಚ್ಚುವ ಹಾಗೆ ಕೆಲಸ ಮಾಡಿದ್ದಾರೆ. ಶ್ರೀಯುತರ ಸಾರ್ಥಕ ಸೇವೆಯ ಹಿಂದೆ ಅವರ ಶ್ರೀಮತಿಯವರ ಪಾಲು ಸಹ ಸಾಕಷ್ಟಿದೆ. ಹೀಗಾಗಿ ಅವರೂ ಅಭಿನಂದನಾರ್ಹರು. ಇಷ್ಟು ದಿನಗಳ ಕಾಲ ನೌಕರರ ನಾವಿಕನಾಗಿದ್ದ ರವಿ ಗುಂಜೀಕರ ಇನ್ನು ಮುಂದೆ ಸಮಾಜದ ನಾವಿಕನಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 60 ಜನ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗಂಧರ್ವ ಇವೆಂಟ್ಸ್ನವರು ತಯಾರಿಸಿದ ರವಿ ಗುಂಜೀಕರ ಅವರ ಜೀವನ-ಸಾಧನೆಗಳ ಸಂಕ್ಷಿಪ್ತ ಪರಿಚಯ ನೀಡುವ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.
ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಡಾ. ರವಿ ಗುಂಜೀಕರರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು. ಜಿಲ್ಲಾ ಭೋವಿ ವಡ್ಡರ್ ಸಮಾಜದ ಸದಸ್ಯರು ಗುಂಜೀಕರ್ ದಂಪತಿಗೆ ಬೆಳ್ಳಿ ಗದೆ ನೀಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ಅಡ್ನೂರು-ರಾಜೂರು ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಓಂಕಾರಗಿರಿಯ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ. ಪಾಟೀಲ, ಶಾಸಕರು ಹಾಗೂ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್. ಪಾಟೀಲ, ಶಾಸಕರಾದ ಚಂದ್ರು ಲಮಾಣಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ, ವಾಸಣ್ಣ ಕುರಡಗಿ, ರಾಜು ಕುರಡಗಿ, ಎಸ್.ಎನ್. ಬಳ್ಳಾರಿ, ಮಲ್ಲಿಕಾರ್ಜುನ ಬಳ್ಳಾರಿ, ಐ.ಕೆ. ಕಮ್ಮಾರ, ಅರುಣಕುಮಾರ ಹಿರೇಮಠ ಸೇರಿದಂತೆ ರವಿ ಗುಂಜೀಕರ ಅಭಿಮಾನಿ ಬಳಗದ ಪದಾಧಿಕಾರಿಗಳು ಹಾಗೂ ಆತ್ಮೀಯರು ಪಾಲ್ಗೊಂಡಿದ್ದರು.
ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿ, ಸರ್ಕಾರಿ ನೌಕರರ ಪ್ರತಿನಿಧಿಯಾಗಿ ಅವರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ರವಿ ಗುಂಜೀಕರ ಅವರು ತಮ್ಮ ಸೇವಾ ಅವಧಿಯಲ್ಲಿ ಬಡವರ ಬಂಧುವಾಗಿ ಕೆಲಸ ಮಾಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಅಗತ್ಯ ಇದ್ದಾಗ ಗುಂಜೀಕರ ಹಾಗೂ ಬಸವರಾಜ ಬಳ್ಳಾರಿಯವರು ಎಂದೂ ಅವರನ್ನು ನಿರಾಸೆಗೊಳಿಸಿಲ್ಲ. ರವಿ ಗುಂಜೀಕರರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶೀರ್ವದಿಸಿದರು.
“ಅಪರೂಪದ ವ್ಯಕ್ತಿತ್ವ ಹೊಂದಿರುವ ರವಿ ಗುಂಜೀಕರ ತಮ್ಮ ನಿವೃತ್ತಿಯನ್ನು ವಿಶಿಷ್ಠವಾಗಿ-ವಿಧಾಯಕವಾಗಿ ಆಚರಿಸಲು ಮನಸ್ಸು ಮಾಡಿದ್ದು ಹೊಸ ಪರಂಪರೆಗೆ ನಾಂದಿ ಹಾಡಿದೆ. ರಕ್ತದಾನ, ಪೌರಕಾರ್ಮಿಕರಿಗೆ ಸನ್ಮಾನ, ಮಹಿಳಾ ದಿನಾಚರಣೆ, ಪರಿಸರ ದಿನ ಹೀಗೆ ಏಳು ದಿನಗಳ ಕಾಲ ಸಮಾಜಮುಖಿ ಕಾರ್ಯಗಳನ್ನು ರವಿ ಗುಂಜೀಕರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದು, ವಿಶೇಷವಾಗಿ ತಾವು ಕಲಿತ ಶಾಲೆಯನ್ನೇ ರವಿ ಗುಂಜೀಕರ ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ”
– ಎಸ್.ವ್ಹಿ. ಸಂಕನೂರ.
ವಿಧಾನ ಪರಿಷತ್ ಸದಸ್ಯ.