ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ಇಂದು ರಾತ್ರಿ ಕಾರ್ಯಾಚರಣೆ ಆರಂಭಿಸಿದೆ. ಆ ಮೂಲಕ ಉಗ್ರ ಪೋಷಕ ಪಾಕಿಸ್ತಾನಕ್ಕೆ ಸರಿಯಾಗಿ ಬುದ್ಧಿ ಕಲಿಸಲು ಭಾರತ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಭಯೋತ್ಪಾದಕ ಶಿಬಿರಗಳ ಮೇಲೆ ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಶುರುಮಾಡಿದೆ. ಪಾಕ್ ಮೇಲೆ ದಾಳಿಯನ್ನು ‘ಆಪರೇಷನ್ ಸಿಂಧೂರ್’ ಎಂದು ಕರೆಯಲಾಗಿದೆ. ಪಾಕಿಸ್ತಾನದ 9 ಪ್ರದೇಶದಲ್ಲಿರುವ ಉಗ್ರರ ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ.
ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ ಮದುವೆಯಾದ ಅನೇಕರನ್ನು ಪಾಪಿ ಭಯೋತ್ಪಾದಕರು ಗುರಿಯಾಗಿಸಿದ್ದರು. ಈ ದಾಳಿ ಅನೇಕರ ಕುಂಕುಮವನ್ನು ಅಳಿಸಿತ್ತು. ಮಹಿಳೆಯರ ಕಣ್ಣೀರಿಗೆ ಸಾಕ್ಷಿ ಆಗಿತ್ತು. ಪ್ರತಿ ಕಣ್ಣೀರಿಗೂ ಲೆಕ್ಕ ನೀಡಲಾಗುವುದು ಎಂದು ಭಾರತ ಪ್ರತಿಜ್ಞೆ ಮಾಡಿತ್ತು.
ಗುರುಗ್ರಾಮದ ಹಿಮಾಂಶಿ ನರ್ವಾಲ್ ಏಪ್ರಿಲ್ 16ರಂದು ವಿವಾಹ ಆಗಿದ್ದ ತಮ್ಮ ಪತಿ ಲೆಫ್ಟಿನೆಂಟ್ ವಿನಯ್ ಜೊತೆ ಹನಿಮೂನ್ ಗೆ ಬಂದಿದ್ದರು. ಈ ವೇಳೆ ವಿನಯ್ ಅವರನ್ನು ಭೀಕರವಾಗಿ ಉಗ್ರರು ಕೊಂದು ಹಾಕಿದ್ದರು. ಜೈಪುರದ ಪ್ರಿಯಾಂಕಾ ಶರ್ಮಾ ಕೂಡ ಪತಿ ರೋಹಿತ್ ಜೊತೆ ಹನಿಮೂನ್ ಗೆ ಬಂದು ಕುಂಕುಮ ಕಳೆದುಕೊಂಡಿದ್ದರು.
ಶಿಮ್ಲಾ ನಿವಾಸಿ ಅಂಜಲಿ ಠಾಕೂರ್ ಅವರು ತಮ್ಮ ಪತಿ ವಿವೇಕ್ ಠಾಕೂರ್ ಜೊತೆ ಪ್ರವಾಸಕ್ಕೆಂದು ತೆರಳಿದ್ದರು, ಅವರು ಸಹ ಇದೇ ವರ್ಷದ ಏಪ್ರಿಲ್ 12 ರಂದು ವಿವಾಹವಾಗಿದರು. ಉಗ್ರರ ದಾಳಿಗೆ ಪತಿಯನ್ನು ಕಳೆದುಕೊಂಡಿದ್ದರು. ಕರ್ನಾಟಕದ ಮಂಜುನಾಥ ರಾವ್ ಮತ್ತು ಭರತ್ ಭೂಷಣ್ ಅವರು ಉಗ್ರರ ದಾಳಿಯಲ್ಲಿ ಬಲಿಯಾಗಿದ್ದರು.
ಮದ್ವೆಯಾಗಿ ವಾರವಾಗುವ ಮುನ್ನವೇ ಹಣೆಯ ಸಿಂಧೂರವನ್ನು ಪಾಪಿಗಳು ಅಳಿಸಿದ್ದರು. ಕಣ್ಣೆದುರೇ ಪತಿಯನ್ನು ಹತ್ಯೆಗೈದು ರಾಕ್ಷಸೀಯ ಕೃತ್ಯ ಎಸಗಿದ್ದರು. ಇದಕ್ಕೆ ʼಅಪರೇಷನ್ ಸಿಂಧೂರʼ ಎನ್ನುವ ಹೆಸರಿನಡಿಯಲ್ಲಿ ಭಾರತ ಪ್ರತೀಕಾರವನ್ನು ತೀರಿಸಿದೆ.
ಸಿಂಧೂರ ಎಂಬ ಪದವು ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ, ರಕ್ಷಣೆ, ಸಮೃದ್ಧಿ, ಸೌಭಾಗ್ಯ, ಶಕ್ತಿ ದೇವತೆ ಪಾರ್ವತಿ, ದುರ್ಗಾ ಶಕ್ತಿಯ ಸಂಕೇತವಾಗಿದೆ. ಭಾರತೀಯ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪವನ್ನು ಸೂಚ್ಯವಾಗಿ ತಿಳಿಸುತ್ತದೆ. ಇದು ಜೀವನ ಮತ್ತು ಬಲಿದಾನದೊಂದಿಗೆ ಸಂಬಂಧ ಹೊಂದಿದೆ. ಸಿಂಧೂರವು ಕೇವಲ ಒಂದು ವಸ್ತುವಲ್ಲ, ಭಾರತೀಯ ಸಂಸ್ಕೃತಿಯಲ್ಲಿ ಆಳವಾದ ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯವನ್ನು ಹೊಂದಿದೆ.



