ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಇನ್ನಿಲ್ಲ!

0
Spread the love

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

Advertisement

ಕೇಂದ್ರದ ಮಾಜಿ ಸಚಿವ ಹಾಗೂ ರೈತ ನಾಯಕ ಬಾಬಾಗೌಡ ಪಾಟೀಲ(78) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗಷ್ಟೇ ನಗರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ.

ಬಾಬಾಗೌಡ ಅವರು ರೈತ ಹೋರಾಟದ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. 80-90 ದಶಕದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದು, ರೈತ ಸಂಘ ಕಟ್ಟಿದ ಪ್ರಮುಖರಲ್ಲಿ ಇವರೊಬ್ಬರು. ಆ ನಂತರ ರಾಜ್ಯದಾದ್ಯಂತ ರೈತ ಸಂಘದ ಮೂಲಕ ರೈತರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ತೊಡೆತಟ್ಟಿ ನಿಂತಿದ್ದರು. ಉತ್ತರ ಕರ್ನಾಟಕವಷ್ಟೆ ಅಲ್ಲದೇ, ದಕ್ಷಿಣ ಕರ್ನಾಟಕದಲ್ಲಿಯೂ ಇವರು ರೈತರಿಗೆ ನಾಯಕರಾಗಿದ್ದರು.

1989ರಲ್ಲಿ ರೈತ ಸಂಘದ ಮೂಲಕ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲದಲ್ಲಿ ಸ್ಪರ್ಧಿಸಿ, ಎರಡೂ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದರು. ಆ ಸಮಯದಲ್ಲಿ ರಾಜ್ಯದ ಇನ್ನಿತರ ಕ್ಷೇತ್ರಗಳಲ್ಲಿ ರೈತ ಸಂಘದ ಸದಸ್ಯರು ತೀವ್ರ ಹೋರಾಟ ನಡೆಸಿ, ಸೋಲು ಕಂಡಿದ್ದರು. ರೈತ ಸಂಘಧ ಇನ್ನೊಬ್ಬ ನಾಯಕ ನಂಜುಂಡಸ್ವಾಮಿ ಕೂಡ ಸೋಲು ಕಂಡಿದ್ದರು. ಆಗ ಬಾಬಾಗೌಡ ಪಾಟೀಲ್ ಮಾತ್ರ ರೈತ ಸಂಘದಿಂದ ಗೆದ್ದ ಏಕೈಕ ವ್ಯಕ್ತಿಯಾಗಿದ್ದರು. ಆ ನಂತರ ಬಾಬಾಗೌಡ ಅವರು ಕಿತ್ತೂರ ಕ್ಷೇತ್ರವನ್ನು ಉಳಿಸಿಕೊಂಡು, ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ನಂಜುಂಡಸ್ವಾಮಿ ಅವರನ್ನು ಧಾರವಾಡ ಗ್ರಾಮೀಣ ಅಖಾಡಕ್ಕೆ ಇಳಿಸಿ, ತಾವೇ ಸ್ವಂತ ಪ್ರಚಾರದ ಹೊಣೆ ಹೊತ್ತು ಅವರನ್ನೂ ಕೂಡ ಗೆಲ್ಲಿಸಿಕೊಂಡು ವಿಧಾನಸಭೆ ಪ್ರವೇಶಿದ್ದರು. ಅಂದು ಬಾಬಾಗೌಡ ಹಾಗೂ ನಂಜುಂಡಸ್ವಾಮಿ ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿದ್ದರೆಂದರೆ, ಇಡೀ ಸದನವೇ ಮೌನ ವಹಿಸುತ್ತಿತ್ತು. ಅಷ್ಟೊಂದು ಆಳ ಅಧ್ಯಯನದ ಮೂಲಕ ಇವರು ಮಾತನಾಡುತ್ತಿದ್ದರು. ರೈತರಿಗೆ ಎಲ್ಲಿಯೇ ಅನ್ಯಾಯವಾದರೂ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡು ಬಗೆ ಹರಿಸುತ್ತಿದ್ದರು.
ಆನಂತರ ರೈತ ಸಂಘದಲ್ಲಿ ಭಿನ್ನಾಭಿಪ್ರಾಯ ತಲೆದೋರಿ, ಬಾಬಾಗೌಡ ಅವರು ಬಿಜೆಪಿ ಸೇರಿದರು.

1998ರಲ್ಲಿ ಬೆಳಗಾವಿ ಲೋಕಸಭೆಯಿಂದ ಸ್ಪರ್ಧಿಸಿ ಜಯಗಳಿಸಿ, ಸಂಸತ್ ಕೂಡ ಪ್ರವೇಶಿಸಿದರು. ಆಗ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸಾಕಷ್ಟು ಜನಸೇವೆ ಮಾಡಿದ್ದಾರೆ. ಗ್ರಾಮ ಸಡಕ್ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೊನೆಗೆ ಬಿಜೆಪಿಯಲ್ಲಿನ ಕೆಲವು ಗುಂಪುಗಾರಿಕೆಯಿಂದ ಬೇಸತ್ತ ಅವರು, ಬಿಜೆಪಿ ತೊರೆದರು.
ಆ ನಂತರ ರೈತ ಸೇವೆ ಮಾಡುತ್ತ, ರೈತರ ಅನ್ಯಾಯದ ವಿರುದ್ಧ ಧ್ವನಿ ಹಾಕುತ್ತ ರೈತ ಸೇವೆಯಲ್ಲಿಯೇ ತೊಡಗಿದ್ದರು.

ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತರಿಗೆ ಮರಣಶಾಸನವಾಗಿದೆ ಎಂದು ಮೋದಿ ವಿರುದ್ಧ ಇತ್ತೀಚೆಗಷ್ಟೇ ಗುಡುಗಿದ್ದರು.

ಸದ್ಯ ಅವರ ನಿಧನಕ್ಕೆ ರಾಜ್ಯದ ರೈತರು ಕಂಬನಿ ಮಿಡಿಯುತ್ತಿದ್ದಾರೆ. ವೀರಶೈವ ಮಹಾಸಭೆಯ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಕಾಂಗ್ರೆಸ್ ನಾಯಕ ಮಲ್ಲನಗೌಡ ಸೋ.ಪಾಟೀಲ, ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಮಂಜುನಾಥ ಮುಗ್ಗನವರ, ವೀರಶೈವ ಮಹಾಸಭೆಯ ಕಾರ್ಯದರ್ಶಿ ಸಿದ್ದಣ್ಣ ಕಂಬಾರ, ನ್ಯಾಯವಾದಿ ಸೋಮಶೇಖರ ಹೂಗಾರ ಸೇರಿದಂತೆ ಹಲವು ಗಣ್ಯರು ಬಾಬಾಗೌಡ ಅವರ ನಿಧನಕ್ಕೆ ಕಣ್ಣೀರು ಸುರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here