ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನವನ್ನು ಇನ್ಫೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿಯವರು ಜೀರ್ಣೋದ್ಧಾರಗೊಳಿಸಿದ ತರುವಾಯ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದೇವಸ್ಥಾನಕ್ಕೆ ಪ್ರವೇಶಿಸುವ ಉತ್ತರ ಭಾಗದ ದ್ವಾರ ಶಿಥಿಲಗೊಂಡಿದ್ದು, ಅದರ ದುರಸ್ತಿ ಕಾರ್ಯವನ್ನು ಶೀಘ್ರ ಪ್ರಾರಂಭಿಸುವಂತೆ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಅವರ ನೇತೃತ್ವದಲ್ಲಿ ಸಚಿವ ಡಾ. ಎಚ್.ಕೆ. ಪಾಟೀಲರಿಗೆ ಬುಧವಾರ ಮನವಿ ಸಲ್ಲಿಸಿದರು.
ಪಟ್ಟಣದ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಚಿವ ಡಾ. ಎಚ್.ಕೆ. ಪಾಟೀಲರನ್ನು ದೇವಸ್ಥಾನದಲ್ಲಿ ಕಮಿಟಿ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಮಿಟಿಯ ಪದಾಧಿಕಾರಿಗಳು ಮನವಿ ಅರ್ಪಿಸಿ, ಶ್ರೀ ಸೋಮೇಶ್ವರ ದೇವಸ್ಥಾನದ ಉತ್ತರ ದ್ವಾರದ ಜೀರ್ಣೋದ್ಧಾರಕ್ಕೆ 50 ಲಕ್ಷ ರೂಗಳ ಅನುದಾನ ಒದಗಿಸುವ ವಾಗ್ದಾನ ಮಾಡಿದ್ದೀರಲ್ಲದೆ, ಕ್ರಿಯಾಯೋಜನೆ ಕೂಡಾ ಮಾಡಿಸುತ್ತಿರುವಿರಿ. ತಮ್ಮ ಈ ಸೇವೆಗಾಗಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಊರಿನ ಎಲ್ಲ ಗುರು-ಹಿರಿಯರು, ಸದ್ಭಕ್ತರು ಕೃತಜ್ಞತೆಗಳನ್ನು ತಿಳಿಸುತ್ತೇವೆ ಎಂದರು.
ಈ ಕಾಮಗಾರಿಗೆ ಆದಷ್ಟು ಶೀಘ್ರ ಚಾಲನೆ ನೀಡಿದರೆ ಹೆಚ್ಚು ಅನೂಕೂಲವಾಗುವದು. ಅಲ್ಲದೆ ಶ್ರೀ ಸೋಮೇಶ್ವರ ದೇವಸ್ಥಾನದ ರಥದ 6 ಚಕ್ರಗಳು ಶಿಥಿಲಾವಸ್ಥೆಯಲ್ಲಿದ್ದು, ಹೊಸ ಚಕ್ರ(ಗಾಲಿ)ಗಳ ನವೀಕರಣಕ್ಕೆ ಸುಮಾರು 15 ಲಕ್ಷಗಳ ರೂಪಾಯಿಗಳ ಅನುದಾನದ ಅವಶ್ಯಕತೆಯಿದ್ದು, ವಿಶೇಷ ಅನುದಾನದಲ್ಲಿ ಹೊಸ ಚಕ್ರಗಳ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ನಿಕಟಪೂರ್ವ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಚನ್ನಪ್ಪ ಜಗಲಿ, ಸಿದ್ದನಗೌಡ ಬಳ್ಳೊಳ್ಳಿ, ಶಂಕರ ಬಾಳಿಕಾಯಿ, ಪೂರ್ಣಾಜಿ ಖರಾಟೆ, ಫಕ್ಕೀರೇಶ ಮ್ಯಾಟಣ್ಣವರ, ವಿರೂಪಾಕ್ಷ ಆದಿ, ಬಾಬು ಅಳವಂಡಿ, ಸುರೇಶ ರಾಚನಾಯ್ಕರ್, ಜಯಕ್ಕ ಕಳ್ಳಿ, ವಿಜಯ ಕರಡಿ, ಮಯೂರಗೌಡ ಪಾಟೀಲ, ನಂದೀಶ, ಪ್ರಕಾಶ ಮುಳಗುಂದ, ಪ್ರಕಾಶ ಕೊಂಚಿಗೇರಿಮಠ ಮುಂತಾದವರಿದ್ದರು.
ಮನವಿಗೆ ಸ್ಪಂದಿಸಿದ ಸಚಿವರು, ಈ ಯೋಜನೆಯಲ್ಲಿ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿರಬಹುದು. ಅದನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡಿಸಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರಲ್ಲದೆ, ದೇವಸ್ಥಾನದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವದಾಗಿ ಭರವಸೆ ನೀಡಿದರು.


