2025ರ ಐಪಿಎಲ್ ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಪ್ಲೇ ಆಫ್ ಟಿಕೆಟ್ ಖಚಿತಪಡಿಸಿಕೊಂಡಿರುವ ಆರ್ ಸಿಬಿಗೆ ಆಘಾತ ಎದುರಾಗಿದೆ. ಒಂದೆಡೆ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ ಭುಜದ ನೋವಿನಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ರೊಮಾರಿಯೊ ಶೆಫರ್ಡ್ ನಿರ್ಣಾಯಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಆರ್ಸಿಬಿ ತಂಡದ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಮುಂದಿನ ವಾರ ವೆಸ್ಟ್ ಇಂಡೀಸ್ಗೆ ಹಿಂತಿರುಗುವ ಸಾಧ್ಯತೆಯಿದೆ. ಏಕೆಂದರೆ ಮೇ 21 ರಿಂದ ವೆಸ್ಟ್ ಇಂಡೀಸ್ ತಂಡವು ಐರ್ಲೆಂಡ್ ವಿರುದ್ಧ ಸರಣಿ ಆಡಲಿದ್ದು. ಇದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ನಡೆಯಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ವೆಸ್ಟ್ ಇಂಡೀಸ್ ತಂಡದಲ್ಲಿ ರೊಮಾರಿಯೊ ಶೆಫರ್ಡ್ ಕಾಣಿಸಿಕೊಂಡಿದ್ದಾರೆ.
ಹೀಗಾಗಿ ಮೇ 17ರ ಬಳಿಕ ರೊಮಾರಿಯೊ ಶೆಫರ್ಡ್ ತವರಿಗೆ ಹಿಂತಿರುವ ಸಾಧ್ಯತೆ ಹೆಚ್ಚಿದೆ. ಅಂದರೆ ಆರ್ಸಿಬಿ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 17 ರಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯದ ಬಳಿಕ ಶೆಫರ್ಡ್ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲು ಕೆರಿಬಿಯನ್ ದ್ವೀಪಕ್ಕೆ ಮರಳಲಿದ್ದಾರೆ ಎನ್ನಬಹುದು.