HomeGadag Newsಅಯ್ಯೋ ಯಾಕ್ರೀ ತಲೆ ತಿಂತೀರಿ…..

ಅಯ್ಯೋ ಯಾಕ್ರೀ ತಲೆ ತಿಂತೀರಿ…..

Spread the love

ವಿಜಯಸಾಕ್ಷಿ ವಿಶೇಷ

ಕೊರೋನಾದಿಂದ ಇನ್ನೂ ಸುಧಾರಿಸಿಕೊಂಡಿಲ್ಲ, ಆಗಲೇ ಬ್ಲಾಕ್ ಫಂಗಸ್, ವೈಟ್ ಫಂಗಸ್, ಮೂರನೇ ಅಲೆ, ಮಕ್ಕಳ ಮೇಲೆ ದಾಳಿ…..

ಏನ್ ನಾವು ಬದುಕಬೇಕಾ ಇಲ್ಲ ಭಯದಿಂದ ಸಾಯಬೇಕಾ ದಯವಿಟ್ಟು ನೀವೇ ಹೇಳಿ ಸ್ವಾಮಿ….

ಆ ಖಾಯಿಲೆ ಬರುತ್ತೆ, ಈ ರೋಗ ಬರುತ್ತೆ, ಕಣ್ಣು ಹೋಗುತ್ತೆ, ರಕ್ತ ಹೆಪ್ಪುಗಟ್ಟುತ್ತೆ, ಹೃದಯ ನಿಲ್ಲುತ್ತೆ, ತಲೆ ಸಿಡಿದು ಹೋಗುತ್ತೆ ಅಂತಾ ಸದಾ ಸುದ್ದಿ ಮಾಡ್ತೀರಿ, ಆಮೇಲೆ ಧೈರ್ಯವಾಗಿರಿ, ಎಚ್ಚರಿಕೆಯಿಂದ ಇರಿ ಅಂತಾನೂ ಹೇಳ್ತೀರಿ…….

ಮೈಮೇಲೆ ಚೇಳು ಬಿಸಾಕಿ ಭಯ ಪಡಬೇಡಿ ಅಂದ್ರೆ ಹೇಗೆ ಸಾಧ್ಯ ಸ್ವಾಮಿ………..

ಜೀವರಾಶಿ ಸೃಷ್ಟಿಯಾದ ಸಮಯದಲ್ಲೇ ಅದಕ್ಕೆ ವಿರುದ್ಧವಾದ ಮತ್ತು ತೊಂದರೆ ಕೊಡುವ ಜೀವಿಗಳು ಸೃಷ್ಟಿಯಾಗಿವೆ. ರೋಗಗಳು ಹೊಸದಲ್ಲ, ರೋಗಿಗಳು ಹೊಸದಲ್ಲ, ಅದರ ವಿರುದ್ಧ ಹೋರಾಟವೂ ಹೊಸದಲ್ಲ, ಹುಟ್ಟುಗಳು ಹೊಸದಲ್ಲ, ಸಾವುಗಳು ಹೊಸದಲ್ಲ………

ಟಿವಿ ವಾಹಿನಿಗಳು ಹೊಸವು, ಎಂಬಿಬಿಎಸ್ ಡಾಕ್ಟರುಗಳು ಹೊಸಬರು, ಪ್ರಜಾಪ್ರಭುತ್ವದಲ್ಲಿ ಚುನಾಯಿತ ಮಂತ್ರಿಗಳು ಹೊಸಬರು, ಜಿಲ್ಲಾಧಿಕಾರಿಗಳು ಹೊಸಬರು ಅಷ್ಟೇ………..

ರೀ ಸ್ವಾಮಿ, ಕಷ್ಟಗಳು, ನೋವುಗಳು, ಮಾರಣಾಂತಿಕ ರೋಗಗಳು ಎಲ್ಲಾ ಕಾಲಕ್ಕೂ ಬೇರೆ ಬೇರೆ ರೂಪದಲ್ಲಿ ಬರುತ್ತಲೇ ಇರುತ್ತವೆ. ಅದರ ವಿರುದ್ಧ ಹೋರಾಟವೂ ನಡೆಯುತ್ತಲೇ ಇರುತ್ತದೆ. ಆ ಸಂಘರ್ಷದಲ್ಲಿ ಸಾವುಗಳು ಸಹ ಸಹಜ.‌

ನಮಗೆ ಸ್ವಂತ ಭವ್ಯ ಬಂಗಲೆ ಇದೆ, ಬೆಲೆ ಬಾಳುವ ಕಾರು ಇದೆ, ಆಸ್ತಿ ಒಡವೆಗಳು ಇದೆ, ಅಧಿಕಾರ ಇದೆ, ಒಳ್ಳೆಯ ಗಂಡ ಹೆಂಡತಿ ಮಕ್ಕಳು ಇದ್ದಾರೆ, ತಿಂಗಳಿಗೆ ಲಕ್ಷಾಂತರ ಬಾಡಿಗೆ ಬಡ್ಡಿ ಸಂಬಳ‌ ಬರುತ್ತದೆ, ಸಾಕಷ್ಟು ಆಳು ಕಾಳು ಊಟ ಬಟ್ಟೆ ಇದೆ, ಆದ್ದರಿಂದ ನಾವು ಅತ್ಯಂತ ಭದ್ರ ಕೋಟೆಯಲ್ಲಿ ಇದ್ದೇವೇ, ಅದರಿಂದ ಸಾವು ನೋವು ರೋಗಗಳನ್ನು ಗೆದ್ದು ಆರಾಮವಾಗಿ ಜೀವನ ಮಾಡಬಹುದು ಎಂಬ ಭ್ರಮೆಗೆ ಒಳಗಾಗಿ ದೇಹ ಮನಸ್ಸುಗಳನ್ನು ದಂಡಿಸದೆ, ಓದು ಪ್ರವಾಸಗಳಿಂದ ಜ್ಞಾನಾರ್ಜನೆ ಮಾಡದೆ, ರುಚಿಗಾಗಿ ತಿನ್ನುತ್ತಾ, ಮಾಲ್ ಗಳಲ್ಲಿ ಓಡಾಡುತ್ತಾ, ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಈಗ ಟಿವಿ ನೋಡಿ ಬೆಚ್ಚಿ ಬಿದ್ದರೆ ಏನು ಪ್ರಯೋಜನ……

ಜಾತಸ್ಯ ಮರಣಂ ಧ್ರುವಂ….

ಮನುಷ್ಯ ಹುಟ್ಟಿದ ಕ್ಷಣದಿಂದ ಮುನ್ನಡೆಯುವುದು ಸಾವಿನ ಕಡೆಗೆ….

O – 100 ವರ್ಷಗಳ ನಡುವೆ ಯಾವಾಗ ಬೇಕಾದರೂ, ಯಾವುದೇ ಕಾರಣದಿಂದ ಸಾವು ಸಂಭವಿಸಬಹುದು. ಆ ಸಾಧ್ಯತೆ ಪ್ರತಿ ಮನುಷ್ಯನಿಗೂ ಪ್ರತಿ ಕ್ಷಣವೂ ಇರುತ್ತದೆ. ಆದರೆ ಸಾರ್ವತ್ರಿಕವಾಗಿ ಭಾರತದ 140 ಕೋಟಿ ಜನಸಂಖ್ಯೆಯ ಈ ಕ್ಷಣದ ಸರಾಸರಿ ಆಯಸ್ಸು ಸುಮಾರು 65 ವರ್ಷಗಳು. ಇದು ಒಂದು ರೀತಿಯ ಅನುಭವದ ಸರಾಸರಿ ಗ್ಯಾರಂಟಿ ಅಥವಾ ವಾರಂಟಿ.

ಸಾವುಗಳು ಸಹಜವಾಗಿದ್ದರು ಕಳೆದ 15 ತಿಂಗಳಿನಿಂದ ಕೊರೋನಾ ಎಂಬ ವೈರಸ್ ಸೋಂಕಿತ ಶೇಕಡಾ 1.5% ಜನರು ಸಾಯುತ್ತಿರುವುದು ವಾಸ್ತವ. ಬಹಳಷ್ಟು ಡಾಕ್ಟರುಗಳ ಹೇಳಿಕೆಯಂತೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮತ್ತು ಈಗಾಗಲೇ ಅನೇಕ ರೋಗಗಳಿಗೆ ತುತ್ತಾಗಿರುವ ಜನರು ಸಾಯುತ್ತಿರುವುದು ಕಂಡು ಬರುತ್ತಿದೆ.

ಅದು ಏನೇ ಇರಲಿ. ವೈದ್ಯಕೀಯ ಭಾಷೆಯಲ್ಲಿ ದೇಹಕ್ಕೆ ಹಿತವಲ್ಲದ ಅನೇಕ ಅಂಶಗಳನ್ನು ರೋಗಗಳು ಎಂದು ಪರಿಗಣಿಸಲಾಗುತ್ತದೆ. ನೆತ್ತಿಯಿಂದ ಪಾದದವರೆಗಿನ ದೇಹದ ಒಳ ಹೊರ ಎಲ್ಲವೂ ಒಳಗೊಂಡ ಯಾವುದೇ ಭಾಗಕ್ಕೆ ಏನೇ ವ್ಯತ್ಯಾಸ ಆದರೂ ಅದನ್ನು ರೋಗ ಎಂದೇ ಕರೆಯಲಾಗುತ್ತದೆ. ಅಧ್ಯಯನದ ದೃಷ್ಟಿಯಿಂದ ಇದಕ್ಕೆ ಅದೇ ವೈದ್ಯಕೀಯ ಭಾಷೆಯಲ್ಲಿ ಏನೇನೂ ಹೆಸರುಗಳನ್ನು ಇಡಲಾಗಿದೆ. ಅವುಗಳ ಸಂಖ್ಯೆ ಬಹುಶಃ ಲಕ್ಷ ಮೀರಬಹುದು.

ಆದರೆ ಈ ವಿವೇಚನಾ ರಹಿತ ಮಾಧ್ಯಮಗಳು ಏನೋ ಹೊಸದನ್ನು ಕಂಡುಹಿಡಿದಂತೆ ಬ್ರೇಕಿಂಗ್ ನ್ಯೂಸ್ ಎಂದು ಅದಕ್ಕೆ ಪ್ರಚಾರ ನೀಡಿ ಹೆದರಿಸಿ ಸಾಮಾನ್ಯ ಜನರ ಬದುಕನ್ನೇ ಅಸಹನೀಯ ಗೊಳಿಸುತ್ತಿವೆ. ಮನುಷ್ಯರಿಗೆ ಖಾಯಿಲೆಗಳು ಬರಬಾರದು, ಅವರು ಸಾಯಲೇ ಬಾರದು ಎಂಬಂತೆ ವಿಚಿತ್ರ ಸಿದ್ದಾಂತ ಮಂಡಿಸುತ್ತಿವೆ. ಅದಕ್ಕೆ ಪೂರಕವಾಗಿ ಒಂದಷ್ಟು ಡಾಕ್ಟರುಗಳು ಸಹ ಅನವಶ್ಯಕ ಭಯ ಪಡಿಸುತ್ತಿದ್ದಾರೆ.

ರೋಗಗಳು ಇದೆ ನಿಜ. ಅದು ವ್ಯಾಪಕವಾಗಿ ಹರಡಿ ಸಾವು ನೋವು ಉಂಟುಮಾಡುತ್ತಿದೆ ಅದೂ ನಿಜ. ಆದರೆ ಸಾಮಾನ್ಯ ಜನರಾದ ನಮಗೆ ಆಯ್ಕೆಗಳು ಸೀಮಿತ. ರೋಗ ಬರದಂತೆ ತಡೆಯಲು ಒಂದಷ್ಟು ಪ್ರಯತ್ನ. ಅದರ ನಂತರವೂ ಬಂದರೆ ಅದನ್ನು ಸಾಧ್ಯವಾದಷ್ಟು ಧೈರ್ಯವಾಗಿ ಎದುರಿಸುವುದು, ಇರುವ ವ್ಯವಸ್ಥೆಯಲ್ಲಿ ನಮ್ಮ ನಿಯಂತ್ರಣ ಮೀರಿದ ಯಾವುದೇ ಫಲಿತಾಂಶಗಳಿಗೆ ಮಾನಸಿಕವಾಗಿ ಸಿದ್ದರಾಗುವುದು. ಇದಕ್ಕಿಂತ ಉತ್ತಮ ಆಯ್ಕೆಗಳು ಸಿಕ್ಕಲ್ಲಿ ಅದನ್ನು ಉಪಯೋಗಿಸಿಕೊಳ್ಳುವುದು‌ ಅಷ್ಟೇ…….

ಸದಾ ಕೊರೋನಾ ಕೊರೋನಾ ಎಂದು ಕೊರಗುತ್ತಾ ಇರುವ ಬದಲು ಅನಾರೋಗ್ಯ ಪೀಡಿತರು ಸಾಧ್ಯವಾದ ಚಿಕಿತ್ಸೆ ಪಡೆಯಿರಿ, ಆರೋಗ್ಯವಂತರು ದೇಹ ಮನಸ್ಸು ಮತ್ತಷ್ಟು ದಂಡಿಸಿ ಉತ್ತಮ ಆಹಾರ ಸೇವಿಸಿ ಎಂದಿನ ಕೆಲಸಗಳಲ್ಲಿ ಸಹಜವಾಗಿ ತೊಡಗಿಸಿಕೊಳ್ಳಿ.

ಆ ರೋಗ ಈ ರೋಗ ಎಂದು ಅನವಶ್ಯಕ ಭಯಪಡಿಸುವ ಸುದ್ದಿಗಳನ್ನು ನಿರ್ಲಕ್ಷಿಸಿ. ದೇಹ ಇರುವವರೆಗೂ ರೋಗಗಳು ಇರುತ್ತವೆ. ಬದುಕು ಇರುವವರೆಗೂ ಕಷ್ಟಗಳು ಇರುತ್ತವೆ. ಹುಟ್ಟಿನ ನಂತರ ಸಾವುಗಳು ಇರುತ್ತವೆ. ಹಾಗೆಯೇ ಅದರ ವಿರುದ್ಧ ಹೋರಾಟಗಳು ಇರುತ್ತವೆ. ಇದು ಪ್ರಕೃತಿಯ ಸಹಜ ಸ್ವಾಭಾವಿಕ ನಿಯಮ.

ಗಾಬರಿಯು ಬೇಡ, ನಿರ್ಲಕ್ಷ್ಯವೂ ಬೇಡ. ಇರುವ ಪರಿಸ್ಥಿತಿಯಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಿ, ಆತ್ಮಾವಲೋಕನ ಮಾಡಿಕೊಂಡು ಸಹಜವಾಗಿ ಬದುಕಲು ಪ್ರಯತ್ನಿಸೋಣ.

ಬ್ಲಾಕ್ ಫಂಗಸ್, ವೈಟ್ ಫಂಗಸ್, ಕೊರೋನಾ ಎಬೋಲ ಕ್ಯಾನ್ಸರ್ ಏಡ್ಸ್ ಎಲ್ಲವೂ ಜೀವ ಜಗತ್ತಿನ ಭಾಗಗಳು. ಅದರೊಂದಿಗೇ ಬದುಕು ಮತ್ತು ಅದರಿಂದಲೇ ಸಾವು. ಈ ಎಲ್ಲಾ ಸಾಧ್ಯತೆಗಳ ನಡುವಿನ ಸಮಯವೇ ಜೀವನ……

ಲೇಖಕರು- ವಿವೇಕಾನಂದ ಹೆಚ್ ಕೆ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!