ಕಲುಬುರಗಿ: ಪ್ರಧಾನಿ ಹಾಗೂ ಅಜಿತ್ ದೋವಲ್ ನಮ್ಮ ಸೇನೆ, ಜನರಿಗೆ ನಿರಾಸೆ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲುಬುರಗಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದವರನ್ನು ನಂಬೋದಕ್ಕೆ ಆಗೋದಿಲ್ಲ. ಅವರು ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ. ಕದನ ವಿರಾಮ ಉಲ್ಲಂಘನೆ ಮಾಡಿದ್ರೆ ವಾರ್ ಆಗುತ್ತೆ ಅಂತಾ ಹೇಳಿದ್ದರು.
ಆದರೆ ಕಳೆದ ಕೆಲ ಬೆಳವಣಿಗೆಯನ್ನು ನೋಡಿದ್ರೆ ಆಶ್ಚರ್ಯ ಆಗುತ್ತಿದೆ. ನಮ್ಮ ಸೈನಿಕರು ಭಯೋತ್ಪಾದನೆ ಹುಟ್ಟುವ ಜಾಗದ ಮೇಲೆ ದಾಳಿ ಮಾಡಿದ್ದರು. ನಮ್ಮ ಸೇನೆಗೆ, ಜನರಿಗೆ ಪ್ರಧಾನಿ ಮೋದಿ ಹಾಗೂ ಅಜಿತ್ ದೋವಲ್ ನಿರಾಸೆ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ವಿದೇಶಾಂಗ ನೀತಿ ಸಂಪೂರ್ಣವಾಗಿ ಕುಸಿದು ಹೋಗಿದೆ. ವಿಶ್ವಗುರು ಅಂತಾ ಹೇಳಿಕೊಳ್ಳುವವರು, ನಾವು ದಾಳಿ ಮಾಡಿದ ಉಗ್ರರ ದೇಶಕ್ಕೆ ಐಎಂಫ್‌ನಿಂದ ಸಾಲ ಸಿಗುತ್ತಿದೆ ಎಂದರೆ ನಾವು ಅವರ ಮನವೊಲಿಸುವಲ್ಲಿ ವಿಫಲರಾಗಿದ್ದೇವೆ ಎಂದು ಅರ್ಥ. ಅಂದರೆ ವಿದೇಶಾಂಗ ನೀತಿಯಲ್ಲಿ ನಾವು ಹಿಂದೆ ಉಳಿದಿದ್ದೇವೆ ಎಂಬ ಅಭಿಪ್ರಾಯ ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ಹೇಳಿದರು.


