ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮಹತ್ವಾಕಾಂಕ್ಷೆಯ ಯೋಜನಗಳೊಂದಿಗೆ ರಾಜ್ಯದಲ್ಲಿ ಬಡವರು ಹಸಿವಿನ ತೊಂದರೆಯನ್ನು ಅನುಭವಿಸದಂತೆ ಈಗಾಗಲೇ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ವಿವಿಧ ಕೆಲಸ, ಕಾರ್ಯಗಳ ನಿಮಿತ್ತ ಆಗಮಿಸುವ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಉಪಹಾರ, ಊಟಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಸ್ಥಾಪಿಸಿ ರಾಜ್ಯದ ಎಲ್ಲಾ, ಜಿಲ್ಲಾ, ತಾಲೂಕು ಹಾಗೂ ಪಟ್ಟಣ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಹೊಟ್ಟೆ ತುಂಬಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ರೋಣ ಶಾಸಕ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಬಣ್ಣಿಸಿದರು.
ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿ ಅಂದಾಜು 1 ಕೋಟಿ 13 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್, ನಗರೋತ್ಥಾನ ಯೋಜನೆಯಡಿ 11. 24 ಲಕ್ಷ ರೂ ವೆಚ್ಚದಲ್ಲಿ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ಧಿಗೆ ಬದ್ಧವಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಮುಂದಾಗಿದೆ. ಪಟ್ಟಣದಲ್ಲಿ ಉದ್ಘಾಟನೆಗೊಂಡಿರುವ ಇಂದಿರಾ ಕ್ಯಾಂಟೀನ್ ನಿರಂತರ ಸೇವೆ ನೀಡುವುದಕ್ಕೆ ಶ್ರಮಿಸಬೇಕಿದೆ. ಉತ್ತಮ ಗುಣಮಟ್ಟದ, ಸ್ವಚ್ಛ ಆಹಾರವನ್ನು ಸಾರ್ವಜನಿಕರಿಗೆ ಒಸಗಿಸಬೇಕು. ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆದ್ಯತೆ ನೀಡಬೇಕು ಎಂದರು.
ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಕಮಿಟಿ ಚೇರಮನ್ ಮುತ್ತಪ್ಪ ನೂಲ್ಕಿ, ಸದಸ್ಯರಾದ ಈರಪ್ಪ ಜೋಗಿ, ಮಲ್ಲಿಕಸಾಬ ರೋಣದ, ದಾವುದಲಿ ಕುದರಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಸನಗೌಡ ಕೊಟ್ಟರು, ಇಇ ಶರಣಪ್ಪ ಓಣಿ, ನಾಮನಿರ್ದೇಶಕ ಸದಸ್ಯರಾದ ಶೇಖಪ್ಪ ಕೆಂಗಾರ, ಕಳಕನಗೌಡ ಪೊಲೀಸ್‌ಪಾಟೀಲ, ಸಕ್ರಪ್ಪ ಹಡಪದ, ಆಶ್ರಯ ಕಮಿಟಿ ಸದಸ್ಯರಾದ ನಿಂಗನಗೌಡ ಲಕ್ಕನಗೌಡ್ರ, ಮಹಮ್ಮದ ಹೊಸಮನಿ, ಮೈಲಾರಪ್ಪ ಗೋಡಿ, ರಾಧಾ ಸಾತನೂರ, ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ, ಅಲ್ಲಾಭಕ್ಷಿ ನದಾಫ್, ಮೈಲಾರಪ್ಪ ಚಳ್ಳಮರದ, ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಸೇರಿದಂತೆ ಸಿಬ್ಬಂದಿಗಳು ಮತ್ತು ಕಾರ್ಯಕರ್ತರಿದ್ದರು.
ನರೇಗಲ್ಲ ಪಟ್ಟಣಕ್ಕೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಆಗಮಿಸುತ್ತಾರೆ. ಆದ್ದರಿಂದ ರಿಯಾಯಿತಿ ದರದಲ್ಲಿ ರುಚಿ-ಶುಚಿಯಾದ ಉಪಹಾರ ಮತ್ತು ಊಟವನ್ನು ನೀಡಬೇಕು. ಸರ್ಕಾರದಿಂದ ವಿಕಲಚೇತನರಿಗೆ ಉಚಿತ ವಾಹನಗಳನ್ನು ನೀಡುತ್ತಿದ್ದು, ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ವಾಹನ ಚಾಲನೆ ಮಾಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.