ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ದೀರ್ಘಾವಧಿಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವಿಚಾರವಾಗಿ ಶಮಿ ಅವರೇ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.
ಪ್ರಮುಖ ವೆಬ್ ಪೋರ್ಟಲ್ವೊಂದು ಮೊಹಮ್ಮದ್ ಶಮಿ ಅವರು ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಈ ಸುದ್ದಿಯನ್ನು ಓದಿರುವ ಟೀಮ್ ಇಂಡಿಯಾ ವೇಗಿ, ಇದು ಸಂಪೂರ್ಣ ಸತ್ಯಕ್ಕೆ ದೂರ ಎಂದಿದ್ದಾರೆ. ಅಲ್ಲದೆ ಈ ಸುದ್ದಿಯ ಸ್ಕ್ರೀನ್ ಶಾಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ.
ತುಂಬಾ ಚೆನ್ನಾಗಿದೆ ಮಹಾರಾಜ್, ನಿಮ್ಮ ಕೆಲಸದ ದಿನಗಳನ್ನು ಎಣಿಸಿ ಮತ್ತು ಯಾವಾಗ ವಿದಾಯ ಹೇಳಬೇಕೆಂದು ಲೆಕ್ಕ ಹಾಕಿ, ನೀವು ನಂತರ ನಮ್ಮನ್ನು ನೋಡಿಕೊಳ್ಳಬಹುದು.’ ನಿಮ್ಮಂತಹ ಜನರು ಹಲವರ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಕೆಲವೊಮ್ಮೆ ಒಳ್ಳೆಯದನ್ನು ಹೇಳಿ. ಇದು ಈ ದಿನದ ಕೆಟ್ಟ ಸುದ್ದಿ ಎಂದು ಮೊಹಮ್ಮದ್ ಶಮಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯ ಸ್ಕ್ರೀನ್ ಶಾಟ್ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಸನ್ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡುತ್ತಿರುವ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ. ಆದರೆ ಇತ್ತ ತಂಡದಲ್ಲಿದ್ದ ಹಿರಿಯ ಆಟಗಾರರು ನಿವೃತ್ತಿ ನೀಡಿರುವ ಕಾರಣ ಶಮಿಗೆ ಅವಕಾಶ ಸಿಗಲಿದೆಯಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.