ಬೆಂಗಳೂರು: ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ನಗರದ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಸದ್ಯ ಈ ಪ್ರಕರಣದ ರದ್ದು ಕೋರಿ ಸೋನು ನಿಗಮ್ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ಬೆಂಗಳೂರಿನ ಅವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಸೋನು ನಿಗಮ್ ಅವರು ಕರ್ನಾಟಕದ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಸೋನು ನಿಗಂ ಸಲ್ಲಿಕೆ ಮಾಡಿದ ಅರ್ಜಿ ವಿಚಾರಣೆಯನ್ನು ವಿಚಾರಣೆ ಮಾಡಿದ ಹೈಕೋರ್ಟ್ ಮೇ.15ರಂದು ವಿಚಾರಣೆ ಮುಂದೂಡಿದೆ. ಇನ್ನು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದೂರು ದಾಖಲಾಗಿದ್ರಿಂದ ಅವಲಹಳ್ಳಿ ಪೊಲೀಸರು ಸೋನು ನಿಗಮ್ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಘಟನೆ ಹಿನ್ನೆಲೆ
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮದಲ್ಲಿ ಸೋನು ನಿಗಮ್ ಅವರು ಭಾಗಿಯಾಗಿದ್ದಾಗ, ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಮನವಿ ಮಾಡಿದ್ದಾನೆ. ಈ ವೇಳೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿದ್ದಾರೆ. ಅಲ್ಲದೇ ಮಾತಾಡುವ ಬರದಲ್ಲಿ ಪಹಲ್ಗಾಮ್ ದಾಳಿ ಹಾಗೂ ಕರ್ನಾಟಕದ ಬಗ್ಗೆ ಮಾತಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.