ವಿಜಯಸಾಕ್ಷಿ ಸುದ್ದಿ, ಹೊಸದುರ್ಗ: ಆದರ್ಶ ಬದುಕಿಗಾಗಿ ಶಿಕ್ಷಣ ಅಗತ್ಯವಿದೆ. ರವಿ ಕಿರಣದಿಂದ ಪುಷ್ಪ ಅರಳಿದರೆ, ಶಿಕ್ಷಣದಿಂದ ಮನುಷ್ಯನ ಬುದ್ಧಿ ವಿಕಾಸಗೊಳ್ಳುತ್ತದೆ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ನಗರದ ಎಸ್.ನಿಜಲಿಂಗಪ್ಪ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿAದ ನಿರ್ಮಿಸಿದ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕಿನ ಉನ್ನತಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಬೇಕು. ಮನುಷ್ಯನ ಬುದ್ಧಿ ವಿಕಾಸಗೊಳ್ಳಬೇಕಲ್ಲದೇ ವಿಕಾರಗೊಳ್ಳಬಾರದು. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಮೂರ್ತಿಯಾಗುವಂತೆ ಸಂಸ್ಕಾರದ ಪೆಟ್ಟು ಬಿದ್ದಾಗ ಜೀವನ ವಿಕಾಸಕ್ಕೆ ಕಾರಣವಾಗುತ್ತದೆ. ವಿನಯವಿಲ್ಲದ ವಿದ್ಯೆ ಪ್ರಜ್ಞೆಯಿಲ್ಲದ ಪ್ರತಿಭೆ ವ್ಯರ್ಥ. ಹೊಟ್ಟೆಗೆ ಕಟ್ಟಿದ ಬುತ್ತಿ ಹಳಸುತ್ತದೆ. ನೆತ್ತಿಗೆ ಕಟ್ಟಿದ ಬುತ್ತಿ ಹುಲುಸಾಗುತ್ತದೆ. ಶಿಕ್ಷಣ ಆರೋಗ್ಯ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಪ್ರವೇಶ ಮಾಡಬಾರದು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದರಲ್ಲಿ ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಮುಂದಿದೆ ಎಂದು ಹರುಷ ವ್ಯಕ್ತಪಡಿಸಿದ ಜಗದ್ಗುರುಗಳು, ಇದಕ್ಕಾಗಿ ಶ್ರಮಿಸಿದ ಸಂಸ್ಥೆಯ ಎಲ್ಲ ಪದಾಧಿಕಾರಿಗಳ ಸಾಧನೆ ಪರಿಶ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಪುರಸಭಾ ಅಧ್ಯಕ್ಷರಾದ ರಾಜೇಶ್ವರಿ ಆನಂದ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿರುವುದನ್ನು ನಾವೆಲ್ಲರೂ ಗಮನಿಸಬೇಕಾದ ಅಗತ್ಯ ಇದೆ ಎಂದರು.
ಎಸ್.ಬಿ. ಪ್ರದೀಪಕುಮಾರ್, ಕೆ.ಸಿ. ಮಲ್ಲಿಕಾರ್ಜುನಪ್ಪ, ಆರ್. ಹನುಮಂತಪ್ಪ, ತಹಸೀಲ್ದಾರ್ ತಿರುಪತಿ ಪಾಟೀಲ, ಹಂಜಿ ಶಿವಸ್ವಾಮಿ ಸಂಸ್ಥೆಯ ಬಗೆಗೆ ಅಭಿಮಾನದ ನುಡಿಗಳನ್ನು ನುಡಿದರು.
ಎಸ್.ನಿಜಲಿಂಗಪ್ಪ ಪ.ಪೂ ವಿದ್ಯಾಲಯ ಮತ್ತು ಎಂ.ಪಿ. ಪ್ರಕಾಶ್ ಪ್ರೌಢಶಾಲೆ ಕಟ್ಟಡಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಉದ್ಘಾಟಿಸಿದರು. ನೊಣವಿನಕೆರೆ ಡಾ. ಕರಿವೃಷಭ ಶಿವಯೋಗೀಶ್ವರ ಸ್ವಾಮಿಗಳು, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು. ಕಾರ್ಯದರ್ಶಿ ಕೆ.ಎಸ್. ಕಲ್ಮಠ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎಂ. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭಕ್ಕೂ ಮುನ್ನ ಶಾಲಾ ಆವರಣದ ಮಂಟಪದಲ್ಲಿ ವಿದ್ಯಾ ಸಂಸ್ಥೆ ಅಭಿವೃದ್ದಿ-ಮಕ್ಕಳ ಅಭ್ಯುದಯಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಎಸ್.ನಿಜಲಿಂಗಪ್ಪನವರ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಿದ್ದು ನಾಡಿನ ಜನತೆಗೆ ಹೆಮ್ಮೆ ತಂದಿದೆ. ಎರಡು ದಶಕದ ಅವಧಿಯಲ್ಲಿ ಭವ್ಯ ಸುಂದರ ಕಟ್ಟಡ ನಿರ್ಮಿಸಿ ಉದ್ಘಾಟಿಸುತ್ತಿರುವುದು ಎಲ್ಲ ಪದಾಧಿಕಾರಿಗಳ ಶ್ರಮ ಸಾಧನೆಗೆ ಸಾಕ್ಷಿಯಾಗಿದೆ. ಈ ಸಂಸ್ಥೆಯ ಅಭಿವೃದ್ಧಿಗೆ ನನ್ನ ಸಹಕಾರ ಯಾವಾಗಲೂ ಇದೆ ಎಂದರು.