ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಇತ್ತೀಚೆಗಷ್ಟೇ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 12 ವರ್ಷದಿಂದ ಪ್ರೀತಿಸುತ್ತಿದ್ದ ಗೆಳೆಯನನ್ನ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಆರೇ ದಿನಕ್ಕೆ ಚೈತ್ರಾ ಕುಂದಾಪುರ ವಿರುದ್ಧ ಸ್ವಂತ ತಂದೆ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್ ಅವರು ಮಗಳು ಹಾಗೂ ಅಳಿಯನ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರು ತನ್ನ ಮದುವೆಗೆ ತಂದೆಯವರನ್ನ ಆಹ್ವಾನಿಸಿಲ್ಲ. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗೋಕೂ ಅವರ ತಂದೆ ಅನುಮತಿ ಕೊಟ್ಟಿರಲಿಲ್ಲವಂತೆ. ಅಲ್ಲದೆ ಚೈತ್ರಾ ಅವರು ತನ್ನ ತಂದೆಯನ್ನು ನೋಡಿಕೊಳ್ಳುತ್ತಿರಲಿಲ್ಲವಂತೆ. ಈ ಎಲ್ಲಾ ಗಂಭೀರ ಆರೋಪಗಳನ್ನು ಬಾಲಕೃಷ್ಣ ನಾಯ್ಕ್ ತಮ್ಮ ಮಗಳ ಮೇಲೆ ಮಾಡಿದ್ದಾರೆ.
ಚೈತ್ರಾ ಕುಂದಾಪುರ ತಂದೆ ಹೇಳಿದ್ದೇನು?
ಚೈತ್ರಾ ಕುಂದಾಪುರ ಮದುವೆಗೆ ನಾನು ಹೋಗಿಲ್ಲ. ಯಾಕಂದ್ರೆ ಅವರಿಬ್ಬರು ಕಳ್ಳರು. ಕಳ್ಳರು, ಕಳ್ಳರು ಮದುವೆ ಆಗೋದು. ಅದರ ಬಗ್ಗೆ ನಾನು ಏನು ಹೇಳೋದು. 12 ವರ್ಷದಿಂದ ಚೈತ್ರಾ ಕುಂದಾಪುರ ಗಂಡ ನಮ್ಮ ಮನೆಯಲ್ಲೇ ಇದ್ದವ. ಅವನು ಕಳ್ಳ. ಇವರು ಕಳ್ಳರು. ಕಳ್ಳ, ಕಳ್ಳರು ಇಬ್ಬರು ಮದುವೆ ಆಗಿದ್ದಾರೆ.
ದರೋಡೆ ಮಾಡೋದು, ದೇಶಕ್ಕೆ ದ್ರೋಹ, ವಂಚನೆ ಮಾಡೋದೇ ಇವರ ಕಸುಬು. ನಮ್ಮ ಕುಟುಂಬದ ಮಾನ, ಮರ್ಯಾದೆಯನ್ನು ತೆಗೆದಿದ್ದಾರೆ. ಅವಳನ್ನ ಕಂಡ್ರೆ ನನಗೆ ಆಗೋದಿಲ್ಲ. ಅವಳು ಎಂದಿಗೂ ಉದ್ಧಾರ ಆಗಲ್ಲ. ಅವರು ಮಾಡೋ ಕೆಟ್ಟ ಕೆಲಸಗಳಿಗೆ ನಾನು ಒಪ್ಪಿಗೆ ಕೊಡಲಿಲ್ಲ. ಅವರು ಮೋಸ, ವಂಚನೆಯಲ್ಲಿದ್ದರು. ನಾನು ಸತ್ಯ, ನ್ಯಾಯ, ಧರ್ಮದಲ್ಲಿ ಇರುವವನು. ತಾನೇ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದೇನೆ ಅನ್ನೋ ಸುಳ್ಳು, ಸುಳ್ಳು ಮಾತನಾಡುತ್ತಾರೆ.