ಬೀದಿ ಬದಿ ವ್ಯಾಪಾರಸ್ಥರಿಗೆ ಕಾನೂನು ಅರಿವು ಅಗತ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬೀದಿ ನಾಟಕ, ಜಾನಪದ ಹಾಡುಗಳ ಮೂಲಕ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಭಾಗಗಳಲ್ಲಿ ಕಾರ್ಯಕ್ರಮ ಆಯೋಜಿಸಲು ತಿರ್ಮಾನಿಸಲಾಗಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕಾಗಿ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಪಡೆಯಬೇಕು. ಬೀದಿ ಬದಿ ವ್ಯಾಪಾರಸ್ಥರಿಗೆ ಕಾನೂನಿನ ಅರಿವು ಇರುವುದು ಅತೀ ಅಗತ್ಯವಿದೆ ಎಂದು ಸಮುದಾಯ ಸಂಘಟನಾಧಿಕಾರಿ ಪ್ರಹ್ಲಾದ್ ತಿಳಿಸಿದರು.

Advertisement

ನಗರದ ಗ್ರೇನ್ ಮಾರುಕಟ್ಟೆಯಲ್ಲಿ ಗುರುವಾರ ಕೌಶಲ್ಯಾಭಿವೃದ್ಧಿ, ಉದ್ಯಮಶಿಲತೆ, ಜೀವನೋಪಾಯ ಇಲಾಖೆ, ಗದಗ-ಬೆಟಗೇರಿ ನಗರಸಭೆ, ಪ್ರಧಾನ ಮಂತ್ರಿ ಬೀದಿ-ಬದಿ ವ್ಯಾಪಾರಿಗಳ ಆತ್ಮನಿರ್ಭರ ಯೋಜನೆ, ಪಿ.ಎಂ ಸ್ವನಿಧಿ, `ಸಮೃದ್ಧ ಯೋಜನೆ ಉತ್ಸವ ಕಾರ್ಯಕ್ರಮ’ದ ಅಂಗವಾಗಿ ಬೀದಿ-ಬದಿ ವ್ಯಾಪಾರಸ್ಥರಿಗೆ ಉತ್ತೇಜನ ನೀಡಲು ಕಾನೂನು ಅರಿವು ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಬಸವರಾಜ ಮಲ್ಲೂರ ಮಾತನಾಡಿ, ಕಾನೂನು ಪಾಲಿಸಲು ಸಾಕಷ್ಟು ಅಡೆ-ತಡೆ ಇದ್ದರೂ ಅದನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಬೀದಿ-ಬದಿ ವ್ಯಾಪಾರಸ್ಥರಿಗೆ ತೊಂದರೆಯಾದರೆ ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು ಎನ್ನುವ ಅರಿವು ನಿಮ್ಮಲ್ಲಿ ಇರಬೇಕು. ವ್ಯಾಪಾರಸ್ಥರು ಮೊದಲು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ಉಪಾಧ್ಯಕ್ಷ ಭಾಷಾಸಾಬ ಮಲ್ಲಸಮುದ್ರ ಮಾತನಾಡಿ, ಮನಮೋಹನ್‌ಸಿಂಗ್ ಪ್ರಧಾನ ಮಂತ್ರಿ ಇರುವಾಗ ಬೀದಿ ವ್ಯಾಪಾರಸ್ಥರ ಸಂರಕ್ಷಣೆಗಾಗಿ 2014ರಲ್ಲಿ ಕಾನೂನನ್ನು ಜಾರಿಗೆ ತಂದರು. ಬೀದಿ ವ್ಯಾಪಾರಸ್ಥರು ಮಹಾನಗರ, ನಗರ, ಪಟ್ಟಣ ಮಾರುಕಟ್ಟೆಯಲ್ಲಿ ಸ್ಥಳೀಯ ಪೌರರ ಅಧ್ಯಕ್ಷತೆಯಲ್ಲಿ ಬೀದಿ-ಬದಿ ವ್ಯಾಪಾರಸ್ಥರಿಂದ 10 ಜನ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಬೀದಿ ವ್ಯಾಪಾರಸ್ಥರು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಲು ಲೀಡ್ ಬ್ಯಾಂಕ್ ಮ್ಯಾನೇಜರ ಅವರನ್ನು ಹಾಗೂ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳುವಳಿಕೆ ನೀಡಿದರು.

ಗುರುರಾಜ ಬಿ.ಗೌರಿ ಮಾತನಾಡಿ, 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ಉಚಿತ ಕಾನೂನು ಸೇವೆಯನ್ನು ನೀಡಲಾಗುತ್ತದೆ. ಕಾನೂನು ಸಮಸ್ಯೆ ಇದ್ದರೂ ಕೂಡ ವ್ಯಾಪಾರಸ್ಥರ ಪರವಾಗಿ ನಾವು ಉಚಿತವಾಗಿ ಕಾನೂನು ಹೋರಾಟ ಮಾಡುತ್ತೇವೆ. ಕಾರ್ಮಿಕರಿಗಾಗಿ ಎಲ್.ಐ.ಸಿ ರೀತಿ ಒಂದು ಯೋಜನೆ ಮಾಡಲು ತಿರ್ಮಾನಿಸಲಾಗಿದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವ್ಯಾಪಾರಸ್ಥರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದರು.


Spread the love

LEAVE A REPLY

Please enter your comment!
Please enter your name here