ವಿಜಯಸಾಕ್ಷಿ ಸುದ್ದಿ, ಗದಗ: ಮಾನವ ಸಮಾಜದಿಂದ ಎಲ್ಲವನ್ನೂ ಪಡೆದಿದ್ದಾನೆ. ಕೊನೆಯಲ್ಲಿ ಅದರ ಋಣ ತೀರಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವ್ಯಕ್ತಿ ಉದ್ಧಾರವಾದರೆ, ದೇಶ ಉದ್ಧಾರವಾಗುತ್ತದೆ. ವಿದ್ಯಾರ್ಥಿಗಳ ಗುರಿ ಕೇವಲ ಸಿಲಬಸ್ ಒಂದೇ ಓದುವುದಲ್ಲ ಅದರಾಚೆಗೆ ತುಂಬ ಸಂಗತಿಗಳಿದ್ದು, ಸಾಧ್ಯವಾದುದನ್ನು ಓದಿ ಎಂದು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ನುಡಿದರು.
ನಗರದ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಯಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ `ಶಾಲಾ-ಕಾಲೇಜಿಗೊಂದು ಶರಣತತ್ವ ಚಿಂತನೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಪ್ರಾಸ್ತಾವಿಕ ನುಡಿಗಳನ್ನಾಡಿ, ಶರಣ ತತ್ವಗಳು ಇಂದಿನ ವಿದ್ಯಾರ್ಥಿಗಳಿಗೆ ತಲುಪಬೇಕು. ಇವುಗಳನ್ನು ಜೀವನದಲ್ಲಿ ಅಳವಡಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕು. ಮಕ್ಕಳು ಶರಣಮಾರ್ಗಿಗಳಾಗಬೇಕೆಂಬ ಉದ್ದೇಶದಿಂದ ಶರಣ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ನುಡಿದರು.
ವೇದಿಕೆಯ ಮೇಲೆ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅಸುಂಡಿ, ಗದಗ ತಾಲೂಕಾ ಕದಳಿ ವೇದಿಕೆಯ ಅಧ್ಯಕ್ಷರಾದ ಸುಲೋಚನಾ ಐಹೊಳಿ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಡಿ.ಎಸ್. ಬಾಪುರಿ, ಜಿಲ್ಲಾ ಕಾರ್ಯದರ್ಶಿ ಬೂದಪ್ಪ ಅಂಗಡಿ, ಡಾ. ಪ್ರಕಾಶ ಹೊಸಮನಿ, ಪಾರ್ವತಿ ಬಳಿಗೇರ, ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು, ಮಹಾವಿದ್ಯಾಲಯದ ಬೋಧಕರು, ಪ್ರಶಿಕ್ಷಣಾರ್ಥಿಗಳು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಪೃಥ್ವಿ ಸ್ವಾಗತಿದರು. ಕಾವೇರಿ ಹೊಂಬಳ ನಿರೂಪಿಸಿದರು. ಸುಧಾ ಹುಚ್ಚಣ್ಣವರ ವಂದಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಪಿ. ಗೌಳಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಎಂದಿಗೂ ಬತ್ತಬಾರದು. ಓದು ನಿತ್ಯದ ಕಾಯಕವಾಗಬೇಕು. ಓದಿನಿಂದ ನಮ್ಮ ಬಾಳಬುತ್ತಿಗೆ ದಾರಿಯಾದರೆ, ಶರಣ ತತ್ವ ಪಾಲನೆಯಿಂದ ಜೀವನ ಸಾರ್ಥಕವಾಗುತ್ತದೆ. ನಿಜವಾಗಿ ತಮ್ಮ ಜೀವನದಲ್ಲಿ ಶರಣ ತತ್ವಗಳನ್ನು ಅಳವಡಿಸಿಕೊಂಡು ಬಾಳುತ್ತಿರುವ ಅರಳಿ ನಾಗರಾಜರ ಜೀವನ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾಗಿದೆ ಎಂದರು.