HomeGadag Newsಸ್ವಾವಲಂಬಿ ಬದುಕಿಗೆ `ಗೃಹಲಕ್ಷ್ಮೀ’ ಆಸರೆ

ಸ್ವಾವಲಂಬಿ ಬದುಕಿಗೆ `ಗೃಹಲಕ್ಷ್ಮೀ’ ಆಸರೆ

For Dai;y Updates Join Our whatsapp Group

Spread the love

ಸ್ವತಂತ್ರ ಭಾರತದಲ್ಲಿ ಮಹಿಳಾ ಸಬಲೀಕರಣಕ್ಕೆ ಮಹತ್ವದ ಹಾದಿಯನ್ನು ತೆರೆದಿರುವ ಹಲವಾರು ಯೋಜನೆಗಳಲ್ಲಿ ಕರ್ನಾಟಕ ರಾಜ್ಯದ `ಗೃಹಲಕ್ಷ್ಮೀ’ ಯೋಜನೆ’ ಒಂದು ದೀಪಸ್ತಂಭದಂತೆ ಬೆಳಗುತ್ತಿದೆ. ಕುಟುಂಬದ ಆರ್ಥಿಕ ಭದ್ರತೆ ಹಾಗೂ ಗೃಹಿಣಿಯ ಸ್ವಾವಲಂಬಿ ಬದುಕಿಗೆ ಇಂಧನ ನೀಡುವ ಈ `ಗೃಹಲಕ್ಷ್ಮೀ’ ಯೋಜನೆ, ಕರುನಾಡಿನ ನಾರಿಯರಿಗೆ ಆರ್ಥಿಕ ಬಲ ನೀಡುವ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ.

ಕರುನಾಡಿನ ಮಹಿಳೆಯರ ಕನಸುಗಳನ್ನು ಸಾಕಾರಗೊಳಿಸಲು ಅಡಿಗಲ್ಲಾಗಿ `ಗೃಹಲಕ್ಷ್ಮೀ’ ಯೋಜನೆ ನಿಂತಿದೆ. ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ. 2000 ನೀಡುವ `ಗೃಹಲಕ್ಷ್ಮೀ’ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಶೇ.98.02ರಷ್ಟು ಸಾಧನೆ ಮಾಡಿದ್ದು, ಇದುವರೆಗೆ 835 ಕೋಟಿ ರೂಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಗದಗ ಜಿಲ್ಲೆಯಲ್ಲಿ ಮಹಿಳೆಯನ್ನು ಕುಟುಂಬದ ಯಜಮಾನಿ ಎಂದು ನಮೂದಿಸಿರುವ 2,53,646 ಪಡಿತರ ಚೀಟಿಗಳಿದ್ದು, ಅವುಗಳಲ್ಲಿ ತೆರಿಗೆ ಪಾವತಿದಾರರು, ಮರಣ ಹೊಂದಿರುವವರು, ಯೋಜನೆ ನಿರಾಕರಿಸಿರುವವರು, ವಲಸೆ ಹೋಗಿರುವವರನ್ನು ಹೊರತುಪಡಿಸಿ, ಪಡಿತರ ಚೀಟಿಗಳಲ್ಲಿ 2,48,632 ಮಂದಿಯನ್ನು ಯೋಜನೆಗೆ ಯಶಸ್ವಿಯಾಗಿ ನೋಂದಾಯಿಸಿ ಶೇ.98.02 ಸಾಧನೆ ಮಾಡಲಾಗಿದೆ.

ಈ ಮಹತ್ತರ ಸಾಧನೆಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲರ ಮುತುವರ್ಜಿ ಹಾಗೂ ಮಾರ್ಗದರ್ಶನವೇ ಕಾರಣವಾಗಿದೆ. `ಗೃಹಲಕ್ಷ್ಮೀ’ ಯೋಜನೆಗೆ ಒಟ್ಟು 5014 ಅನರ್ಹರಾಗಿರುವವರಲ್ಲಿ 2,707 ಮಂದಿ ಆದಾಯ ತೆರಗೆ ಮತ್ತು ಜಿ.ಎಸ್.ಟಿ ಪಾವತಿದಾರರು, 926 ಮಂದಿ ಮರಣ ಹೊಂದಿರುವವವರು, 1381 ನಿಷ್ಕ್ರಿಯಗೊಂಡ ಪಡಿತರ ಚೀಟಿಗಳು ಒಳಗೊಂಡಿದ್ದಾರೆ.

ಯೋಜನೆಯಡಿಯಲ್ಲಿ ಗದಗ ತಾಲೂಕಿನಲ್ಲಿ 80,363 ಫಲಾನುಭವಿಗಳನ್ನು ನೋಂದಾಯಿಸಿದ್ದು, ಗಜೇಂದ್ರಗಡದಲ್ಲಿ 27,102, ಲಕ್ಷ್ಮೇಶ್ವರದಲ್ಲಿ 26,773, ಮುಂಡರಗಿಯಲ್ಲಿ 35,198, ನರಗುಂದದಲ್ಲಿ 23,938, ರೋಣದಲ್ಲಿ 36,857, ಶಿರಹಟ್ಟಿದಲ್ಲಿ 23,415 ಮಂದಿಯನ್ನು ನೋಂದಾಯಿಸಲಾಗಿದೆ.

`ಗೃಹಲಕ್ಷ್ಮೀ’ ಯೋಜನೆಯಿಂದ ಬಂದ ಹಣ ಕೂಡಿಟ್ಟು ಅತ್ತೆ-ಸೊಸೆ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಿಸಿ ಕೃಷಿ ಬದುಕು ಕಟ್ಟಿಕೊಂಡಿದ್ದಾರೆ. ಗಜೇಂದ್ರಗಡ ಪಟ್ಟಣದ ನಿವಾಸಿಯಾದ ಮಾಬುಬ್ಬಿ ಮಾಲ್ದಾರ ಹಾಗೂ ಅವರ ಸೊಸೆ ರೋಷನ್‌ಬೇಗಂ ಮಾಲ್ದಾರ ಸೇರಿದಂತೆ ಸಾವಿರಾರು ಮಹಿಳೆಯರ ಬದುಕಿಗೆ ಬೆಳಕಾಗಿರುವ `ಗೃಹಲಕ್ಷ್ಮೀ’ ಯೋಜನೆ ಯಿಂದ ಪ್ರತಿ ತಿಂಗಳು ಬಂದ ರೂ. 2000 ಹಣ ಕೂಡಿಟ್ಟು ತಮ್ಮ ಮೂರು ಎಕರೆ ಜಮೀನಿನಲ್ಲಿ 60 ಸಾವಿರ ರೂಪಾಯಿ ಖರ್ಚು ಮಾಡಿ, ಬೋರ್‌ವೆಲ್ ಕೊರೆಯಿಸಿ ಕೃಷಿ ಬದುಕು ಕಟ್ಟಿಕೊಂಡು, ಸ್ವಾವಲಂಬಿ ಜೀವನ ನಡೆಸಲು ಮುಂದಾಗಿದ್ದಾರೆ.

ಅತ್ತೆ-ಸೊಸೆ ಸೇರಿಕೊಂಡು, ಯಶಸ್ವಿ ಕೃಷಿ ಮಾಡಬೇಕೆಂಬ ಹಂಬಲದಿಂದ ರಾಜ್ಯ ಸರ್ಕಾರದ `ಗೃಹಲಕ್ಷ್ಮೀ’ ಯೋಜನೆಯಿಂದ ಬಂದ ಹಣ ಕೂಡಿಟ್ಟು ತಮ್ಮ ಮಳೆಯಾಶ್ರಿತ ಭೂಮಿಯಲ್ಲಿ ಬೋರ್‌ವೆಲ್ ಕೊರೆಯಿಸಿದ್ದು, ಸುಮಾರು 1.5 ಇಂಚು ನೀರು ದೊರಕಿತ್ತು. ಅತ್ತೆ-ಸೊಸೆಯ ಕೃಷಿ ಕನಸಿಗೆ ಶಕ್ತಿ ದೊರೆತಂತಾಗಿದೆ. ಕೃಷಿ ಕುಟುಂಬದಿಂದ ಬಂದಿರುವ ಮಾಬುಬ್ಬಿ ಮಾಲ್ದಾರ ಅವರು ವ್ಯವಸಾಯವೇ ನಂಬಿ ಬದುಕು ಸಾಗಿಸುತ್ತಿದ್ದಾರೆ.

ಮಳೆಯನ್ನೇ ನಂಬಿ ಬೇಸಾಯ ಮಾಡುತ್ತಿದ್ದ, ಮಾಬುಬ್ಬಿ ಅವರಿಗೆ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಹಲವಾರು ಬಾರಿ ಹಾನಿಯಾಗಿ, ಕೃಷಿಯೇ ಬೇಡವೆಂದು ನೊಂದಿರುವ ಪ್ರಸಂಗವೂ ನಡೆದಿದೆ. ಆದರೂ ಸಹ ಛಲಬಿಡದೇ ಕೃಷಿಯಲ್ಲಿಯೇ ಬದುಕು ಮುನ್ನಡೆಸಿಕೊಂಡು ಬಂದು, ಇದೀಗ ಬೋರ್‌ವೆಲ್ ಕೊರೆಸುವ ಮೂಲಕ ಯಶಸ್ವಿ ಕೃಷಿ ಮಾಡಲು `ಗೃಹಲಕ್ಷ್ಮೀ’ ಯೋಜನೆ ಆಸರೆಯಾಗಿದೆ.

ಇಂತಹ ಹಲವಾರು ನಿದರ್ಶನಗಳು ಗದಗ ಜಿಲ್ಲೆಯಲ್ಲಿ `ಗೃಹಲಕ್ಷ್ಮೀ’ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿವೆ.

“`ಗೃಹಲಕ್ಷ್ಮೀ’ ಯೋಜನೆ ನಮ್ಮ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಬಲ ನೀಡುವ ಮಹತ್ವದ ಹೆಜ್ಜೆಯಾಗಿದ್ದು, ಇದು ಕೇವಲ ಹಣದ ನೆರವಲ್ಲ, ಗೌರವ ಮತ್ತು ಆತ್ಮವಿಶ್ವಾಸವನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಗೃಹಿಣಿಯ ಶ್ರಮವನ್ನು ಗುರುತಿಸುವ ಈ ಯೋಜನೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತಿದೆ. ಅರ್ಹ ಫಲಾಬುಭವಿಗಳಿಗೆ ಯೋಜನೆಯ ಸೌಲಭ್ಯ ನಿರ್ದಿಷ್ಟ ಸಮಯದಲ್ಲಿ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ”

– ಬಿ.ಬಿ. ಅಸೂಟಿ.

ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ

ಅನುಷ್ಠಾನ ಪ್ರಾಧಿಕಾರ, ಗದಗ ಜಿಲ್ಲೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!